ಡೈಲಿ ವಾರ್ತೆ: 06/Mar/2024
ರಾಮೇಶ್ವರಂ ಕೆಫೆ ಸ್ಫೋಟ: ಬಾಂಬರ್ ಫೋಟೋ ಬಿಡುಗಡೆ, ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ
ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ, ಶಂಕಿತ ಉಗ್ರ ಇನ್ನೂ ಪತ್ತೆಯಾಗಿಲ್ಲ. ಬಾಂಬರ್ ಪತ್ತೆಗಾಗಿ ಪೊಲೀಸರ ತಂಡ ಶೋಧ ನಡೆಸುತ್ತಿದೆ. ಈ ಮಧ್ಯೆ ಕೆಫೆ ಬಾಂಬ್ ಸ್ಫೋಟದ ತನಿಖೆಯನ್ನ NIA ಅಧಿಕಾರಿಗಳು ಅಧಿಕೃತವಾಗಿ ಕೈಗೆತ್ತಿಕೊಂಡಿದ್ದು, ಇದೀಗ ಬಾಂಬರ್ ಫೋಟೋ ಬಿಡುಗಡೆ ಮಾಡಿದೆ. ಅಲ್ಲದೇ ಈ ಬಾಂಬರ್ ಬಗ್ಗೆ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಣೆ ಮಾಡಿದೆ.
ಸಿಸಿಬಿ ತನಿಖೆ ವೇಳೆ ಬಾಂಬರ್ ಮಾಸ್ಕ್ ಹಾಕಿಕೊಳ್ಳದ ಫೋಟೋ ಪತ್ತೆಯಾಗಿದ್ದು, ಇದೀಗ ಆ ಫೋಟೋವನ್ನು ಎನ್ಐಎ ಬಿಡುಗಡೆ ಮಾಡಿದೆ. ಅಲ್ಲದೇ ಆರೋಪಿ ಬಗ್ಗೆ ಗೊತ್ತಿದ್ದರೆ ಕೂಡಲೇ 080-29510900, 8904241100 ಸಂಖ್ಯೆಗೆ ಫೋನ್ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಎನ್‌ಐಎ ಮನವಿ ಮಾಡಿದೆ. ಆರಂಭದಲ್ಲಿ ಪೊಲೀಸರು, ಎಲ್ಲಾ ಸಿಸಿಟಿಗಳ ಪರಿಶೀಲನೆ ಮಾಡಿದಾಗ ಆರೋಪಿ, ಕ್ಯಾಪ್, ಮಾಸ್ಕ್ ಚೆಸ್ಮಾ ಹಾಕಿರುವ ದೃಶ್ಯಗಳೇ ಸಿಕ್ಕಿದ್ದವು. ಆದ್ರೆ, ಸಿಸಿಬಿ ತನಿಖೆಯ ವೇಳೆ ಬಾಂಬರ್ ಮಾಸ್ಕ್ ಹಾಕಿಕೊಳ್ಳದ ಒಂದು ಫೋಟೋವನ್ನು ಪತ್ತೆ ಮಾಡಿದೆ. ಇದೀಗ ಅದೇ ಫೋಟೋವನ್ನು ಎನ್ಐಎ ಬಿಡುಗಡೆ ಮಾಡಿದೆ.
ಈ ಕುರಿತು ಎಕ್ಸ್ ನಲ್ಲಿ (ಟ್ವೀಟ್) ಬಾಂಬರ್ ಫೋಟೋ ಹಂಚಿಕೊಂಡಿರುವ ಎನ್ಐಎ, ಆರೋಪಿಯ ಸುಳಿವು ಕೊಟ್ಟವರಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಹೇಳಿದೆ. ಒಂದು ವೇಳೆ ಸುಳಿವು ಸಿಕ್ಕರೆ 080289510999 ಮತ್ತು 8904241100 ಈ ನಂಬರ್ ಗಳಿಗೆ ಮಾಹಿತಿ ನೀಡಬಹುದು.ಇನ್ನು ಭಾತ್ಮೀದಾರರ(ಸುಳಿವು ಕೊಟ್ಟವರು) ಮಾಹಿತಿಯನ್ನ ಗೌಪ್ಯವಾಗಿ ಇಡಲಾಗುವುದೆಂದು ಸ್ಪಷ್ಟಪಡಿಸಿದೆ.