ಡೈಲಿ ವಾರ್ತೆ: 06/Mar/2024
ಬಂಟ್ವಾಳ: ಮಾ.12 ರಿಂದ 17ರ ವರೆಗೆ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದ ಬ್ರಹ್ಮರಥೋತ್ಸವ ಕಾರ್ಯಕ್ರಮ
ಬಂಟ್ವಾಳ : ನೇತ್ರಾವತಿ ನದಿ ತಟದಲ್ಲಿರುವ ಚಿನ್ನದ ಪೇಟೆ ಖ್ಯಾತಿಯ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನಕ್ಕೆ ಬ್ರಹ್ಮ ರಥ ಸಮರ್ಪಣೆಯಾಗಿ 200 ನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ
” ಬ್ರಹ್ಮರಥೋತ್ಸವ 2024” ಅಂಗವಾಗಿ ಮಾ.12 ರಿಂದ ಮಾ.17 ರವರೆಗೆ ವಿವಿಧ ಕಾರ್ಯಕ್ರಮಗಳು ಶ್ರೀ ಕಾಶೀ ಮಠಾಧೀಶ ಶ್ರೀ ಶ್ರೀ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಜರಗಲಿದೆ ಎಂದು ದೇವಳದ ಆಡಳಿತ ಮೊಕ್ತೇಸರ ಅಶೋಕ್ ಶೆಣೈ ತಿಳಿಸಿದರು.
ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾ.10 ರಂದು ದೇವರಿಗೆ ಸಮಾಜ ಬಾಂಧವರಿಂದ ಮಲ್ಲಿಗೆ ಹೂವಿನಿಂದ ಸಹಸ್ರನಾಮ ಪುಷ್ಪಾರ್ಚನೆ ನಡೆಯಲಿದೆ. ಅದೇ ದಿನ ಸಂಜೆ 5.30 ಕ್ಕೆ ಬಂಟ್ವಾಳ ಬಡ್ಡಕಟ್ಟೆಯ ಶ್ರೀ ಹನುಮಂತ ದೇವಸ್ಥಾನದ ಬಳಿಯಿಂದ ವಿಶೇಷ ಹೊರೆಕಾಣಿಕೆ ಮೆರವಣಿಗೆ ಕ್ಷೇತ್ರಕ್ಕೆ ಬರಲಿದೆ ಎಂದು ತಿಳಿಸಿದರು.
ಮಾ.11 ರಂದು ಸಮಾಜ ಬಾಂಧವರಿಂದ ಲಕ್ಷ ತುಳಸಿ ಅರ್ಚನೆ ಹಾಗೂ ಮಹಿಳೆಯರಿಂದ ಲಕ್ಷ ಪುಷ್ಪಾರ್ಚನೆ ನಡೆಯಲಿದೆ. ಕಾಶೀ ಮಠದ ವೃಂದಾವನದಲ್ಲಿ ಶ್ರೀ ಹನುಮಂತ ದೇವರಿಗೆ ಗಂಧ ಲೇಪನ ಸೇವೆ ಜರಗಲಿರುವುದು. ಸಂಜೆ 6 ಕ್ಕೆ ಗಂಗಾರತಿ ನಡೆಯಲಿದೆ. ಮಾ.12 ರಂದು ಗರುಡೋತ್ಸವ, ಮಾ. 13 ರಂದು ಹನುಮಂತೋತ್ಸವ, ಮಾ.14 ರಂದು ಚಂದ್ರಮಂಡಲೋತ್ಸವ, ಮಾ.15 ರಂದು ಸಣ್ಣ ರಥೋತ್ಸವ, ಮಾ.16 ರಂದು ಬ್ರಹ್ಮರಥೋತ್ಸವ, ಮಾ.17 ರಂದು ಅವಭೃತೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ರಥೋತ್ಸವ ಕಾರ್ಯಕ್ರಮದ ಅಂಗವಾಗಿ ವಿಶೇಷವಾಗಿ ಪಟ್ಟದ ಶ್ರೀನಿವಾಸ ದೇವರಿಗೆ 50 ಪವನ್ ಚಿನ್ನ ಹಾಗೂ ಉತ್ಸವ ಮೂರ್ತಿಗೆ 50 ಪವನ್ ಚಿನ್ನ, ಕಾಶಿಮಠಕ್ಕೆ ಚಿನ್ನದ ಸರ ಹಾಗೂ ಬ್ರಹ್ಮರಥಕ್ಕೆ 10 ಕೆ.ಜಿ.ಬೆಳ್ಳಿಯ ಪ್ರಭಾವಳಿ ನೀಡಲಾಗುತ್ತದೆ ಎಂದು ತಿಳಿಸಿದರು
ಶೈಕ್ಷಣಿಕವಾಗಿಯೂ ಅನೇಕ ಕೊಡುಗೆಗಳನ್ನು ಕ್ಷೇತ್ರದ ವತಿಯಿಂದ ನೀಡುತ್ತಿದ್ದು ಈಗಾಗಲೇ ಪ್ರಾಥಮಿಕ ಹಾಗೂ ಹೈಸ್ಕೂಲ್ ವರೆಗೆ ಶಿಕ್ಷಣ ನೀಡಲಾಗುತ್ತಿದ್ದು ಮುಂದಿನ ಅವಧಿಯಲ್ಲಿ ಪಿ.ಯು .ಕಾಲೇಜು ಆರಂಭಿಸಲಿದ್ದೇವೆ ಎಂದು ತಿಳಿಸಿದರು.
ಮೊಕ್ತೇಸರ ಬಿ.ಸುರೇಶ್ ಬಾಳಿಗಾ ಮಾತನಾಡಿ 200 ವರ್ಷಗಳ ರಥೋತ್ಸವವನ್ನು ವಿಜ್ರಂಭಣೆಯಿಂದ ನಡೆಸಲು ಸಕಲ ಸಿದ್ದತೆಗಳನ್ನು ಮಾಡಿದ್ದೇವೆ.ಕಾರ್ಯಕ್ರಮದ ಅಂಗವಾಗಿ ಧಾರ್ಮಿಕ, ವಿಶೇಷವಾದ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮೊಕ್ತೇಸರ ಬಾಮಿ ನಾಗೇಂದ್ರನಾಥ ಶೆಣೈ, ವಸಂತ ಪ್ರಭು, ಶಿವಾನಂದ ಬಾಳಿಗಾ, ಬಸ್ತಿ ಮಾದವ ಶೆಣೈ ಉಪಸ್ಥಿತರಿದ್ದರು.