



ಡೈಲಿ ವಾರ್ತೆ: 08/Mar/2024


ಕೋಟತಟ್ಟು ಗ್ರಾ. ಪಂ: ದಾನಿಗಳ ನೆರವಿನಿಂದ ಕೊರಗರ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ

ಕೋಟ: ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾ. ಪಂ. ವ್ಯಾಪ್ತಿಯ ಚಿಟ್ಟಿಬೆಟ್ಟು ಕೊರಗ ಕಾಲೋನಿಯ ಎಂಟು ಕುಟುಂಬಗಳಿಗೆ ಹೊಸ ಮನೆ ನಿರ್ಮಿಸಲು ಸರಕಾರವು ಸರಾಸರಿ ತಲಾ 3.5 ಲಕ್ಷ ಮಂಜೂರುಗೊಳಿಸಿದ್ದು,ದಾನಿಗಳ ಸಹಕಾರದೊಂದಿಗೆ
ಏಳು ಲಕ್ಷ ರೂ.ವೆಚ್ಚದಲ್ಲಿ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ಶುಕ್ರವಾರ ನಡೆಯಿತು.

ಅರ್ಚಕ ಸಾಲಿಗ್ರಾಮ ಜನಾರ್ಧನ ಅಡಿಗರು ಪೂಜಾ ವಿಧಿವಿಧಾನವನ್ನು ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಮಾತನಾಡಿ ಕೋಟತಟ್ಟು ಗ್ರಾಮದಲ್ಲಿ ಕೊರಗ ಜನಾಂಗದವರಿಗೆ ದಾನಿಗಳ ನೆರವಿನಿಂದ ಮನೆ ಕಟ್ಟಿಕೊಡುವಂತಹದ್ದು ಒಂದು ಉತ್ತಮವಾದ ಕೆಲಸ. ಇದರಿಂದ ಇಡೀ ಉಡುಪಿ ಜಿಲ್ಲೆಗೆ ಒಂದು ಉತ್ತಮ ಸಂದೇಶ ನೀಡುತ್ತದೆ.
ಏಕೆಂದರೆ ಕಷ್ಟದಲ್ಲಿ ಇರುವ ಒಂದು ಸಮುದಾಯಕ್ಕೆ ದಾನಿಗಳು ನಾವು ನೆರವು ನೀಡುತ್ತೇವೆ ಎಂದು ಮುಂದೆ ಬರುವುದು ಅವರ ದೊಡ್ಡಗುಣ.
ಅವರಿಗೆ ನಮ್ಮ ಉಡುಪಿ ಜಿಲ್ಲಾಡಳಿತ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಮಾತನಾಡಿ ಕೊರಗ ಜನಾಂಗವು ಒಂದು ಊರಲ್ಲಿ ಇದ್ದರೆ ಸಮಾಜಕ್ಕೆ ಗೌರವ ಹಾಗೂ ಅಭಿಮಾನ. ಕೊರಗ ಜನಾಂಗ ಎಂದರೆ ಅದೊಂದು ಮುಗ್ಧ ಜನಾಂಗ. ಅವರಲ್ಲಿ ಯಾವುದೇ ಭೇದಭಾವ ಇಲ್ಲದೆ ಎಲ್ಲರೊಂದಿಗೂ ಒಳ್ಳೆ ರೀತಿಯಲ್ಲಿ ಬದುಕುವವರು. ಇಂತಹ ಮುಗ್ಧ ಕೊರಗ ಜನಾಂಗದ ಅಭಿವೃದ್ಧಿಗೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದರು.



ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕೋಟತಟ್ಟು ಗ್ರಾ. ಪಂ. ಅಧ್ಯಕ್ಷ ಸತೀಶ್ ಬಾರಿಕೆರೆ, ಉಪಾಧ್ಯಕ್ಷೆ ಸರಸ್ವತಿ, ಡಾ. ಪ್ರಕಾಶ್ ತೋಳಾರ್, ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ್ ನಾವುಡ, ಉದ್ಯಮಿ ಸುರೇಶ್ ಕಾಂಚನ್, ಕೊರಗ ಸಮಾಜದ ಮುಖಂಡ ಗಣೇಶ್ ಕೊರಗ ಉಪಸ್ಥಿತರಿದ್ದರು.
ಕೋಟತಟ್ಟು ಗ್ರಾಮ ಅಭಿವೃದ್ಧಿಅಧಿಕಾರಿ ರವೀಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.