ಡೈಲಿ ವಾರ್ತೆ: 09/Mar/2024
ಪಕ್ಷವಿರೋಧಿಗಳನ್ನು ಮಂಡಲ ಪದಾಧಿಕಾರಿಗಳನ್ನಾಗಿ ಆಯ್ಕೆ: ಕರುಣಾಕರರೆಡ್ಡಿ
- ಆಯ್ಕೆ ರದ್ದಾಗದಿದ್ದರೆ ಯಾವುದೇ ಪಕ್ಷದ ಚಟುವಟಿಕೆಯಲ್ಲಿ ಭಾಗಿಯಾಗುವುದಿಲ್ಲ : ಜಿ.ಕರುಣಾಕರ ರೆಡ್ಡಿ ಸ್ಪಷ್ಟನೆ
ಹರಪನಹಳ್ಳಿ: ತಾಲೂಕಿನಿಂದ ಜಿಲ್ಲಾ ಬಿಜೆಪಿ ಕಮಿಟಿಗೆ ಹಾಗೂ ಮಂಡಲ ಪದಾಧಿಕಾರಿಗಳನ್ನಾಗಿ ಪಕ್ಷವಿರೋಧಿಗಳನ್ನ ಆಯ್ಕೆ ಮಾಡಿರುವುದನ್ನ ನಾವು ಖಂಡಿಸುತ್ತೇವೆ ಎಂದು ಮಾಜಿ ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.
ಪಟ್ಟಣದ ಕೊಟ್ಟೂರು ರಸ್ತೆಯಲ್ಲಿರುವ ಅವರ ಖಾಸಗೀ ನಿವಾಸದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು. ಪಕ್ಷ ನಿಷ್ಠರನ್ನು ಮರೆತು ಪಕ್ಷ ವಿರೋಧಿಗಳಿಗೆ ಸ್ಥಾನ ಮಾನ ನೀಡಿರುವುದನ್ನು ಪ್ರತಿಯೊಬ್ಬ ಕಾರ್ಯಕರ್ತನೂ ವಿರೋಧಿಸಿದ್ದು, ತಕ್ಷಣದಿಂದಲೇ ಈಗಾಗಲೇ ಮಾಡಿರುವ ಪದಾಧಿಕಾರಿಗಳ ಆಯ್ಕೆಯನ್ನು ರದ್ದು ಮಾಡಬೇಕು. ರದ್ದು ಮಾಡದ ಹೊರತು ಮುಂದೆ ಜರುಗುವ ಯಾವುದೇ ಪಕ್ಷದ ಕಾರ್ಯಕ್ರಮಗಳಿಗೆ ಚಟುವಟಿಕೆಗಳಿಗೆ ನಾವು ಬಾಗಿಯಾಗುವುದಿಲ್ಲ ಎಂದರು.
ಕಳೆದ 28 ವರ್ಷಗಳಿಂದ ಪಕ್ಷದಲ್ಲಿ ದುಡಿಯುತ್ತಿದ್ದೇನೆ ನಮ್ಮನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪಕ್ಷದ ತಾಲೂಕು ಮುಖಂಡರು ಹಾಗೂ ನಿಷ್ಟಾವಂತ ಕಾರ್ಯಕರ್ತರನ್ನೂ ಕಡೆಗಣಿಸಿರುವುದು ಉತ್ತಮ ಬೆಳವಣಿಗೆಯಲ್ಲ. ಪಕ್ಷದ ಕಾರ್ಯಕರ್ತರು ಪಕ್ಷದ ಬದ್ರ ಬುನಾದಿಯಿದ್ದಂತೆ ಅವರಿಗೆ ನನ್ನ ಬೆಂಬಲ ಸದಾ ಇರುತ್ತದೆ. ಕಾರ್ಯಕರ್ತರಿಲ್ಲದೆ ನಾವಿಲ್ಲ. ಶೀಘ್ರದಲ್ಲೆ ಕಾರ್ಯಕರ್ತರ ತಂಡ ರಾಜ್ಯಾಧ್ಯಕ್ಷರ ಬಳಿ ನಿಯೋಗ ಹೋಗಲಿದೆ. ನ್ಯಾಯಯುತ ಆಯ್ಕೆ ಆಗುವವರೆಗೂ ನಮ್ಮ ನಿಲುವು ಬದಲಾಗುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಕಿರಣ್ ಶಾನಬೋಗ್, ಜಾವೀದ್, ಗೌಳಿ ವಿನಯ್, ಹನುಮಂತಪ್ಪ, ಬಿಜೆಪಿ ಜಿಲ್ಲಾ ಮಾಜಿ ಕಾರ್ಯದರ್ಶಿ ಹಾಗೂ ಪುರಸಭೆ ನಾಮನಿರ್ದೇಶಿತ ಸದಸ್ಯರಾದ ಆರ್.ಲೋಕೇಶ್, ಕೆಂಗಳ್ಳಿ ಪ್ರಕಾಶ್, ಮುಖಂಡರುಗಳಾದ ಕಲ್ಲೇರ ಬಸವರಾಜ್, ಲಕ್ಷ್ಮೀಪುರದ ಪಿ.ಟಿ ಶಿವಾಜಿ ನಾಯ್ಕ್, ಯಡಿಹಳ್ಳಿ ಶೇಖರಪ್ಪ, ಉಪ್ಪಾರ ತಿಮ್ಮಣ್ಣ, ಪೂಜಾರ್ ಮಹೇಶ್, ಹಲುವಾಗಲು ಗಿರೀಶಪ್ಪ, ರಾಗಿಮಸಲವಾಡದ ಕರೆಗೌಡ್ರು, ಹಲುವಾಗಲು ದ್ಯಾಮಪ್ಪ, ವಿರಭದ್ರಪ್ಪ, ಯಡತ್ತಿನಳ್ಳಿ ಮಂಜುನಾಥ್, ನೀಲಗುಂದ ಶಾನಬೋಗರ ಗಿರೀಶ್, ರೆಡ್ಡಿ ಸಿದ್ದೇಶ್, ಅಲ್ಮರಸಿಕೇರಿ ಮಂಜುನಾಥ್, ಮತ್ತಿಹಳ್ಳಿ ಕೊಟ್ರೇಶ್, ವಾಗೀಶ್, ಲತಾ, ಸುವರ್ಣಮ್ಮ, ವೆಂಕಮ್ಮ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.