ಡೈಲಿ ವಾರ್ತೆ: 09/Mar/2024
“ಗ್ಯಾರಂಟಿ ಯೋಜನೆ” ಬಂಟ್ವಾಳ ತಾಲೂಕು ಮಟ್ಟದ ಫಲಾನುಭವಿಗಳ ಸಮಾವೇಶ
ಬಂಟ್ವಾಳ : ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ನೀಡಿದ್ದ ಗ್ಯಾರಂಟಿ ಯೋಜನೆಯನ್ನು ಅಧಿಕಾರಕ್ಕೆ ಬಂದ ತಕ್ಷಣವೇ ಜಾರಿಗೆ ತರುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ನುಡಿದಂತೆ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ಬಂಟ್ವಾಳ ತಾಲೂಕು ಆಡಳಿತ ವತಿಯಿಂದ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ನಲ್ಲಿ ನಡೆದ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಎಲ್ಲಾ ವರ್ಗದ ಜನರ ಹಿತದೃಷ್ಟಿಯಿಂದ ಸರಕಾರ ಯೋಜನೆ ಜಾರಿ ಮಾಡಿದ್ದು ನೂರಾರು ಟೀಕೆ ಟಿಪ್ಪಣಿಗಳನ್ನು ಎದುರಿಸಿಕೊಂಡು ಯೋಜನೆಯನ್ನು ಜನತೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ ಎಂದ ಅವರು ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರವು ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ಆಹಾರ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಅನ್ನಭಾಗ್ಯ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಸರಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಜನತೆಗೆ ಬಹಳಷ್ಟು ಲಾಭವಾಗಿದ್ದು,ಆರ್ಥಿಕವಾಗಿ ಸದೃಢ ಹೆಜ್ಜೆಯನ್ನು ಇಡಲು ಸಾಧ್ಯವಾಗಿದೆ, ಕೇವಲ ಭಾವನೆಗಳಿಂದ ಬದುಕು ಸಾಗಿಸಲು ಸಾಧ್ಯವಿಲ್ಲ ಇದನ್ನು ಅರ್ಥ ಮಾಡಿಕೊಂಡು ಜೀವನ ನಡೆಸಬೇಕಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಗ್ಯಾರಂಟಿಗೆ ವಾರಂಟಿ ಇಲ್ಲ ಎಂದು ಅಪಹಾಸ್ಯ ಮಾಡುವ ವಿರೋಧ ಪಕ್ಷದವರಿಗೆ ಬಡವರಿಗೆ ನೀಡುವ ಯೋಜನೆ ಬಗ್ಗೆ ಯಾಕೆ ಹೊಟ್ಟೆಕಿಚ್ಚು ಎಂದು ಪ್ರಶ್ನಿಸಿದ ಅವರು, ವಿರೋಧ ವ್ಯಕ್ತಪಡಿಸುವ ನೀವು ನಿಮಗೆ ಸಾಧ್ಯವಿದ್ದರೆ ಇಂತಹ ಯೋಜನೆಯನ್ನು ಜನರಿಗೆ ನೀಡಿ ಎಂದು ಸವಾಲೆಸೆದರು. ರಾಜ್ಯದಲ್ಲಿ
ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇರುವವರೆಗೆ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲು ಸಾದ್ಯವಿಲ್ಲ ಎಂದು ಭರವಸೆ ನೀಡಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಾಜಿ ಸಚಿವ ಬಿ.ರಮಾನಾಥ ರೈ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆನಂದ, ಸಹಾಯಕ ಆಯುಕ್ತ ರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಉಸ್ಮಾನ್ ಉಪಸ್ಥಿತರಿದ್ದರು.
ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮುಮ್ತಾಜ್, ಕೌಶಲ್ಯ ಅಭಿವೃದ್ಧಿ ಯೋಜನೆ ಇಲಾಖೆ ಅಧಿಕಾರಿ ಪ್ರದೀಪ್ ಡಿ.ಸೋಜ, ಮೆಸ್ಕಾಂ ಎ.ಇ.ಇ.ನಾರಾಯಣ ಭಟ್, ಕೆ.ಎಸ್.ಆರ್.ಟಿ.ಸಿ.ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ್ ಶೆಟ್ಟಿ, ಬಂಟ್ವಾಳ ತಹಶಿಲ್ದಾರ್ ಅರ್ಚನಾ ಭಟ್ ವಿವಿಧ ಗ್ಯಾರಂಟಿ ಯೋಜನೆ ಹಾಗೂ ವಿವಿಧ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾದ ಅನಿತಾ ಡೇಸಾ, ಸರೋಜಿನಿ ಸರಪಾಡಿ, ಶಬಾನಾ ಕಾವಳಕಟ್ಟೆ, ಗಿರೀಶ್ ಪೆರ್ವ, ವೀಣಾ ಕೊಳ್ನಾಡು ಹಾಗೂ ಹುಸೈನ್ ಬೋಳಂತೂರು ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಸ್ವಾಗತಿಸಿ, ಬಂಟ್ವಾಳ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ವಂದಿಸಿದರು.
ಬಾಲಕೃಷ್ಣ ಕೊಡಾಜೆ ಮತ್ತು ರಾಜೀವ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು.