ಡೈಲಿ ವಾರ್ತೆ: 09/Mar/2024

ವಯೋ ಸಹಜ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಲೀಕನನ್ನು ನೋಡಲು ಓಡೋಡಿ ಬಂದ ಆನೆ.!

ವಿಡಿಯೋ ವೈರಲ್

ಜಗತ್ತಿನಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಅತ್ಯಂತ ಸೂಕ್ಷ್ಮ ಮನಸ್ಸು ಹೊಂದಿರುವ ಪ್ರಾಣಿ ಎಂದರೆ ಅದು ಆನೆ (ಗಜರಾಜ) ಎಂದು ಸಂಶೋಧನೆ ಯಿಂದ ತಿಳಿದು ಬಂದಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಸಾಕಷ್ಟು ಭಾವನಾತ್ಮಕ ವಿಡಿಯೋಗಳ ಉದಾಹರಣೆಗಳನ್ನು ನಾವೂ ನೋಡಬಹುದಾಗಿದೆ.
ಆನೆಗಳು ಸಹ ಸಂಬಂಧಗಳಿಗೆ ಮನುಷ್ಯರಂತೆ ತುಂಬಾ ಬೆಲೆ ಕೊಡುತ್ತವೆ. ಆನೆಗಳು ಪರಸ್ಪರ ಸಹಾಯ ಮಾಡುತ್ತಾ ಸಹಬಾಳ್ವೆಯಿಂದ ಜೀವನ ನಡೆಸುತ್ತವೆ.

ಈ ಮುಗ್ಧ ಪ್ರಾಣಿಗಳ ನಿಷ್ಕಲ್ಮಶ ಪ್ರೀತಿ, ಕಾಳಜಿ ನಿಜಕ್ಕೂ ನಮ್ಮ ಹೃದಯ ತುಂಬುವಂತೆ ಮಾಡುತ್ತವೆ. ಇದೀಗ ಅಂತಹದೊಂದು ಹೃದಯಸ್ಪರ್ಷಿ ವಿಡಿಯೋ ವೈರಲ್ ಆಗಿದ್ದು, ವಯೋ ಸಹಜ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಲೀಕನನ್ನು ನೋಡಲು ಆನೆಯೊಂದು ಓಡೋಡಿ ಬಂದಿದೆ.
ವಿಡಿಯೋವನ್ನು @navvandirababu ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವಂತಹ ವಯಸ್ಸಾದ ಮಾಲೀಕನನ್ನು ಕಾಣಲು ಗಜರಾಜ (ಆನೆ) ಬಂದಿರುವಂತಹ ದೃಶ್ಯವನ್ನು ಕಾಣಬಹುದು.

ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮಾಲೀಕ ಆಸ್ಪತ್ರೆಗೆ ದಾಖಲಾದ ಹಿನ್ನಲೆಯಲ್ಲಿ ಅವರನ್ನು ಕಾಣಲು ಆನೆಯೊಂದು ಆಸ್ಪತ್ರೆಗೆ ಭೇಟಿ ನೀಡಿದಂತಹ ಭಾವನಾತ್ಮಕ ದೃಶ್ಯವನ್ನು ಕಾಣಬಹುದು. ನನ್ನ ಮಾಲೀಕ ಈಗ ಹೇಗಿದ್ದಾರೋ, ಅವರನ್ನು ನಾನು ನೋಡಲೇಬೇಕು ಎಂದು ಆಸ್ಪತ್ರೆಗೆ ಬಂದಂತಹ ಗಜರಾಜ ಮಾಲೀಕನ ಕೈಯನ್ನು ತನ್ನ ಸೊಂಡಿಲಿನಿಂದ ಹಿಡಿದು ಸಾಂತ್ವನಿಸಿದೆ. ಜೊತೆಗೆ ಮಾಲೀಕನನ್ನು ಈ ಸ್ಥಿತಿಯಲ್ಲಿ ಕಂಡು ಆನೆಯು ಭಾವುಕವಾಗಿದೆ.
ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋವನ್ನು ಈಗಾಗಲೇ 1.5 ಮಿಲಿಯನ್ ವೀಕ್ಷಣೆ ಕಂಡಿದ್ದು, ಹಲವಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ.