ಡೈಲಿ ವಾರ್ತೆ: 12/Mar/2024
ಸಿಎಎ ಎಂದರೇನು? ಮುಸ್ಲಿಮರು ವಿರೋಧಿಸುತ್ತಿರುವುದು ಯಾಕೆ? ಎನ್ ಆರ್ ಸಿಗೂ ಅದಕ್ಕೂ ಏನು ಸಂಬಂಧ? ಇಲ್ಲಿದೆ ವಿವರ
ಪೌರತ್ವ ತಿದ್ದುಪಡಿ ಕಾಯ್ದೆಯ ನಿಯಮಗಳ (CAA rules) ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸುತ್ತಿದೆ. ಸಿಎಎ ವಿಚಾರ ಕಳೆದ ನಾಲ್ಕೈದು ವರ್ಷದಿಂದಲೂ ಸಾಕಷ್ಟು ಚರ್ಚೆ, ಪ್ರತಿಭಟನೆಗೆ ಕಾರಣವಾಗಿದೆ. ಅದರಲ್ಲೂ ಎನ್ಆರ್ ಸಿ ಮತ್ತು ಸಿಎಎ ಸಂಯೋಜನೆ ವಿರುದ್ಧ ಮುಸ್ಲಿಮರು ಹಾಗೂ ಹಲವು ವಿಪಕ್ಷಗಳು ತೀವ್ರವಾಗಿ ಆಕ್ಷೇಪಿಸುತ್ತಿವೆ. ಸಿಎಎ ಎಂದರೇನು, ಎನ್ಆರ್ ಸಿ ಇದಕ್ಕೂ ಏನು ಸಂಬಂಧ, ಕೆಲ ಮುಸ್ಲಿಮರು ಯಾಕೆ ವಿರೋಧಿಸುತ್ತಿದ್ದಾರೆ, ಆ ವಿರೋಧದಲ್ಲಿ ಸತ್ಯಾಸತ್ಯತೆ ಎಷ್ಟು ಇತ್ಯಾದಿ ಕೆಲ ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ.
ಸಿಎಎ ಎಂದರೇನು?
ಪೌರತ್ವ ತಿದ್ದುಪಡಿ ಮಸೂದೆ ಭಾರತದ ನೆರೆಯ ದೇಶಗಳಾದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ 2014ರ ಡಿಸೆಂಬರ್ 31ಕ್ಕೆ ಮುಂಚೆ ಭಾರತಕ್ಕೆ ಬಂದ ಆರು ಅಲ್ಪಸಂಖ್ಯಾತ ಸಮುದಾಯಗಳ ಜನರಿಗೆ ಭಾರತೀಯ ಪೌರತ್ವ ಹೊಂದುವ ಅವಕಾಶ ಕೊಡುತ್ತದೆ. ಆ ಮೂರು ಮುಸ್ಲಿಮ್ ದೇಶಗಳಲ್ಲಿನ ಹಿಂದೂ, ಕ್ರೈಸ್ತ, ಸಿಖ್, ಜೈನ, ಬೌದ್ಧ ಮತ್ತು ಪಾರ್ಸಿ ಸಮುದಾಯಗಳ ಜನರಿಗೆ ಈ ಮನ್ನಣೆ ಕೊಡಲಾಗಿದೆ.
ಮಾಮೂಲಿಯ ಕಾನೂನು ಪ್ರಕಾರ ಯಾವುದೇ ವ್ಯಕ್ತಿ ಭಾರತೀಯ ಪೌರತ್ವ ಹೊಂದಬೇಕಾದರೆ 11 ವರ್ಷ ಇಲ್ಲಿ ವಾಸ ಮಾಡಿರಬೇಕು. ಸಿಎಎಯಲ್ಲಿ ನೆರೆಯ ದೇಶಗಳ ಅಲ್ಪಸಂಖ್ಯಾತ ಸಮುದಾಯಗಳಿಗೆ ಒಂದಷ್ಟು ವಿನಾಯಿತಿ ಕೊಡಲಾಗಿದೆ.
ಸಿಎಎಗೆ ಮುಸ್ಲಿಮರ ವಿರೋಧ ಯಾಕೆ?
ಸಿಎಎಯಲ್ಲಿ ಧಾರ್ಮಿಕವಾಗಿ ತಾರತಮ್ಯ ಮಾಡಲಾಗಿದೆ. ಅಲ್ಪಸಂಖ್ಯಾತರ ಪಟ್ಟಿಯಲ್ಲಿ ಮುಸ್ಲಿಮರಿಲ್ಲ. ಶ್ರೀಲಂಕಾ ಮೊದಲಾದ ನೆರೆಯ ದೇಶಗಳಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಿದ್ದಾರೆ. ಅವರಿಗೆ ಯಾಕೆ ಪೌರತ್ವ ಕೊಡುತ್ತಿಲ್ಲ? ಮುಸ್ಲಿಮರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ ಎಂಬದು ಕೆಲ ವರ್ಗದ ಮುಸ್ಲಿಮರಿಂದ ಬರುತ್ತಿರುವ ಆಕ್ಷೇಪವಾಗಿದೆ.
ಪೌರತ್ವ ಅವಕಾಶ ಎಲ್ಲರಿಗೂ ಸಮಾನವಾಗಿರಬೇಕು. ಕೆಲ ನಿರ್ದಿಷ್ಟ ಸಮುದಾಯಗಳಿಗೆ ಮನ್ನಣೆ ಕೊಡುವುದು ತಪ್ಪು ಎಂಬುದು ಕೆಲ ವಿಪಕ್ಷಗಳ ಆಕ್ಷೇಪವೂ ಆಗಿದೆ.
ಎನ್ಆರ್ಸಿ ಮತ್ತು ಸಿಎಎ ಸಂಯೋಜನೆ ಅಪಾಯಕಾರಿ ಎನ್ನುವ ವಿರೋಧಿಗಳು
ಎನ್ಆರ್ ಸಿ ಎನ್ನುವುದು ನಾಗರಿಕರ ನೊಂದಣಿ ಯೋಜನೆಯಾಗಿದೆ. ಇದು ದೇಶದ ಎಲ್ಲಾ ಪ್ರಜೆಗಳ ಅಧಿಕೃತ ಪಟ್ಟಿಯಾಗಿರುತ್ತದೆ. ಅಕ್ರಮವಾಗಿ ವಲಸೆ ಬಂದವರನ್ನು ಗುರುತಿಸಿ ಹೊರಗಿಡುವುದು ಇದರ ಮೂಲ ಉದ್ದೇಶ. ಅದರಲ್ಲೂ ಮಯನ್ಮಾರ್ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದ ಜನರನ್ನು ಗುರುತಿಸಲು ಈ ಎನ್ ಆರ್ ಸಿ ಸಹಾಯವಾಗುವ ನಿರೀಕ್ಷೆ ಇದೆ.