ಡೈಲಿ ವಾರ್ತೆ: 14/Mar/2024

ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕೆ.ಆರ್.ಪುರಂ ಖಾಕಿ.!

ಕೆ.ಆರ್.ಪುರಂ: ಲಂಚ ಸ್ವೀಕರಿಸುವಾಗ ಕೆ.ಆರ್ ಪುರಂ ಪೊಲೀಸ್ ಇನ್ಸ್ಪೆಕ್ಟರ್ ವಜ್ರಮುನಿ ಹಾಗೂ ಸಬ್ ಇನ್ಸ್ಪೆಕ್ಟರ್ ರಮ್ಯಾ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಒಂದು ಲಕ್ಷ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಇವರು ಲೋಕಾ ಬಲೆಗೆ ಬಿದ್ದ ಖಾಕಿಗಳಾಗಿದ್ದಾರೆ.

ಘಟನೆಯ ವಿವರ : 420ಕೇಸ್‌ನಲ್ಲಿ ಜಯಶೀಲಾ ಹಾಗೂ ಅವರ ಪತಿ ಶ್ರೀರಾಂನನ್ನು ಕೆ.ಆರ್. ಪುರಂ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಮ್ಯಾರವರು ದಿನಾಂಕ: 12/03/2014ರಂದು ರಾತ್ರಿ 8 ಘಂಟೆ ಸುಮಾರಿಗೆ ಬಂಧಿಸಿರುತ್ತಾರೆ. ಆದರೆ, ಸದರಿಯವರು ಕೆ.ಆರ್. ಪುರಂ ವ್ಯಾಪ್ತಿಗೊಳಪಡದ ಇವರ ವಿರುದ್ಧ 420 ಕೇಸ್‌ನಡಿಯಲ್ಲಿ ಎಫ್.ಐ.ಆರ್. ದಾಖಲು ಮಾಡುತ್ತಾರೆ.
ಕೂಡಲೇ ವಕೀಲರನ್ನು ಜಯಶೀಲಾ ಹಾಗೂ ಶ್ರೀರಾಮ್‌ರವರು ಸಂಪರ್ಕಿಸುತ್ತಾರೆ. ವಕೀಲರು 420 ಕೇಸ್‌ನಡಿಯಲ್ಲಿ ಕೇಸ್ ರಿಜಿಸ್ಟಾರ್ ಮಾಡುವಂತಿಲ್ಲವೆಂದು ಎಷ್ಟೇ ತಿಳಿ ಹೇಳಿದರೂ, ರಮ್ಯಾರವರು ಅವಾಚ್ಯ ಶಬ್ಧಗಳಿಂದ ವಕೀಲರನ್ನೇ ನಿಂದಿಸಿ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ತಡರಾತ್ರಿ 1ಘಂಟೆ ಸುಮಾರಿಗೆ 50 ಸಾವಿರ ಹಣವನ್ನು ಕೊಟ್ಟು, ಆರೋಪಿಗಳನ್ನು ಠಾಣೆಯಿಂದ ವಕೀಲರು ಹೊರ ತಂದಿದ್ದಾರೆ. ಆದರೆ, ಪ್ರಕರಣ ಇಷ್ಟಕ್ಕೆ ಮುಗಿಯದೇ, ಪ್ರತಿ ದಿನ ರಮ್ಯಾರವರು ಉಳಿದ 4.50 ಲಕ್ಷ ಹಣ ಕೊಡುವಂತೆ ಪೀಡಿಸಿದ್ದಾರೆ.

ಕೆ.ಆರ್. ಪುರಂ ಠಾಣೆಯವರು ಇಂತದ್ದೇ ದಂಧೆಯನ್ನು ಸುಮಾರು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆಂದು ಆರೋಪಿಸಿರುವ ವಕೀಲರು ಕೂಡಲೇ ತಮ್ಮ ಕಕ್ಷಿದಾರರೊಂದಿಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ, 1 ಲಕ್ಷ ಹಣ ಲಂಚ ಕೊಡುವಾಗ ಲೋಕಾ ಖೆಡ್ಡಾಕ್ಕೆ ಕೆಡವಿಕೊಂಡಿರುತ್ತಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಯಂತೆ ರಕ್ಷಣೆ ಮಾಡಬೇಕಾದ ಖಾಕಿಗಳೇ ಲಂಚಗುಳಿತನಕ್ಕೆ ಇಳಿದರೆ ಗತಿಯೇನು ಎಂಬುದೇ ಸಾರ್ವಜನಿಕರ ಪ್ರಶ್ನೆಯಾಗಿದೆ.