ಡೈಲಿ ವಾರ್ತೆ: 15/Mar/2024
ಗುಂಡ್ಲುಪೇಟೆ: ಬಿಸಿಯೂಟ ಸೇವಿಸಿ 14 ವಿದ್ಯಾರ್ಥಿಗಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು!
ಗುಂಡ್ಲುಪೇಟೆ: ಮಧ್ಯಾಹ್ನದ ಬಿಸಿಯೂಟ ಸೇವಿಸಿ ವಾಂತಿ ಕಾಣಿಸಿಕೊಂಡ ಹಿನ್ನಲೆ ಸುಮಾರು 14 ಮಕ್ಕಳು ಅಸ್ವಸ್ಥರಾಗಿರುವ ಘಟನೆ ತಾಲೂಕಿನ ಚಿರಕನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದಿದೆ.
ಚಿರಕನಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿಯಲ್ಲಿ ಒಟ್ಟು 35 ಮಂದಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇದರಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ತಯಾರಿಸಿದ್ದ ಹುರುಳಿ ಮೊಳಕೆ ಕಾಳಿನ ಸಾಂಬರ್ ಸೇವಿಸಿ 14 ಮಂದಿ ಮಕ್ಕಳಿಗೆ ವಾಂತಿ ಕಾಣಿಸಿಕೊಂಡಿದೆ. ಕೂಡಲೇ ವಿದ್ಯಾರ್ಥಿಗಳನ್ನು ಬೊಮ್ಮನಹಳ್ಳಿ ಆಸ್ಪತ್ರೆಗೆ ರವಾನಿಸಿ ಗ್ಲೂಕೋಸ್ , ಇಂಜೆಕ್ಷನ್ ನೀಡಲಾಗಿದೆ. ಮಕ್ಕಳು ಚಿಕಿತ್ಸೆಗೆ ಸ್ಪಂದಿದ್ದಾರೆ. ಉಳಿದ 17 ಮಂದಿ ವಿದ್ಯಾರ್ಥಿಗಳಿಗೆ ಮಾತ್ರೆ ನೀಡಿ ಮನೆಗೆ ಕಳುಹಿಸಲಾಗಿತ್ತು. ನಂತರ ಪೋಷಕರ ಒತ್ತಾಯದ ಮೇರೆಗೆ ಅಸ್ವಸ್ಥಗೊಂಡಿದ್ದ 14 ಹಾಗೂ ಮನೆಗೆ ತೆರಳಿದ್ದ 17 ಮಂದಿ ಸೇರಿದಂತೆ ಒಟ್ಟು 31 ಮಕ್ಕಳನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಉಳಿದ 4 ವಿದ್ಯಾರ್ಥಿಗಳ ಪೋಷಕರು ನಮ್ಮ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಗೆ ಕಳುಹಿಸದೆ ಮನೆಯಲ್ಲಿಯೇ ಉಳಿಸಿಕೊಂಡಿದ್ದಾರೆ.
ಬೊಮ್ಮನಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಮಕ್ಕಳು ಆರೋಗ್ಯವಾಗಿದ್ದರು. ಆದರೂ ಪೋಷಕರ ಒತ್ತಾಯದ ಮೇರೆಗೆ ಚಾಮರಾಜನಗರ ಆಸ್ಪತ್ರೆಗೆ ಕರೆದೊಯ್ದು ಮತ್ತೊಮ್ಮೆ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ ಎಂದು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ ತಿಳಿಸಿದರು.