ಡೈಲಿ ವಾರ್ತೆ: 18/Mar/2024
ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ರೆ ಬಿಜೆಪಿ ಬೇಸ್ ಉಳಿಯುತ್ತೆ: ಸುಮಲತಾ
ನವದೆಹಲಿ: ನಾನು ಸ್ಪರ್ಧೆ ಮಾಡಬೇಕು ಅನ್ನೋದಕ್ಕಿಂತ ಮಂಡ್ಯದಲ್ಲಿ ಸ್ಪರ್ಧೆ ಮಾಡಬೇಕು. ಸ್ಪರ್ಧೆ ಮಾಡಿದರೆ ಮಂಡ್ಯದಲ್ಲಿ ಬಿಜೆಪಿ ಬೇಸ್ ಉಳಿಯುತ್ತದೆ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.
ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಮಂಡ್ಯ ಲೋಕಸಭೆ ಕ್ಷೇತ್ರದ ಬಗ್ಗೆ ಸುಮಲತಾ ಚರ್ಚಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಸ್ಪರ್ಧೆ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. ನಿಶ್ಚಿಂತೆಯಾಗಿರಿ, ಏನೂ ನಿರ್ಧಾರ ಆಗಿಲ್ಲ ಎಂದು ನಡ್ಡಾ ಹೇಳಿದ್ದಾರೆ. ನಿಮ್ಮಂತ ನಾಯಕಿ ಪಕ್ಷಕ್ಕೆ ಬೇಕು ಎಂದಿದ್ದಾರೆ. ಇಂದು ಸಿಇಸಿ ಮೀಟಿಂಗ್ ಆಗುತ್ತದೆ. ಬಳಿಕ ಅಂತಿಮ ನಿರ್ಧಾರ ತಿಳಿಸುವುದಾಗಿ ನಡ್ಡಾ ಹೇಳಿದ್ದಾರೆ ಎಂದರು.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸ್ಪರ್ಧೆ ಊಹಾಪೋಹದ ಕುರಿತು ಪ್ರತಿಕ್ರಿಯಿಸಿದ ಅವರು, ಯಾವ ಕ್ಷೇತ್ರ ಖಾಲಿ ಇರುತ್ತದೆ ಅಲ್ಲಿ ನನ್ನ ಹೆಸರು ಜೋಡಿಸುತ್ತಿದ್ದಾರೆ. ಕಳೆದ ಬಾರಿ ಪಕ್ಷೇತರವಾಗಿ ನಿಲ್ಲಿ ಎಂದು ಅಭಿಮಾನಿಗಳು ಹೇಳಿದ್ದರು. ಮುಂದೆ ಯಾವುದೇ ನಿರ್ಧಾರ ಮಾಡುವುದಿದ್ದರೆ ಅವರನ್ನೇ ಕೇಳುತ್ತೇನೆ. ಇಂದು ಹೈಕಮಾಂಡ್ ಏನು ನಿರ್ಧಾರ ಮಾಡುತ್ತದೆ ಅದನ್ನು ಬೆಂಬಲಿಗರೊಂದಿಗೆ ಚರ್ಚಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು.
ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಮಂಡ್ಯದಲ್ಲಿ ಜೆಡಿಎಸ್ ಸ್ಪರ್ಧೆ ಮಾಡುತ್ತೇವೆ ಅನ್ನೋದು ಸಹಜ. ಏನೂ ಸಮಸ್ಯೆ ಆಗದೆ ಇರೋತರ ಮಾಡಬೇಕಾಗುತ್ತದೆ. ಪಕ್ಷ ಏನು ಹೇಳುತ್ತದೆ ಅದನ್ನು ಮಾಡುತ್ತೇನೆ. ನಾಳೆ ಮಂಡ್ಯಕ್ಕೆ ಹೋಗಿ ಬೆಂಬಲಿಗರೊಂದಿಗೆ ಮಾತನಾಡುತ್ತೇನೆ. ಸಂಧಾನ ಮಾಡುವ ಪ್ರಯತ್ನ ಇಂದು ಆಗಿಲ್ಲ. ಇವತ್ತಿನ ಮಾತುಕತೆ ಮ್ಯೂಚುವಲ್ ಆಗಿತ್ತು. ಕಾರ್ಯಕರ್ತರನ್ನು ಬಿಟ್ಟುಕೊಟ್ಟು ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದಿದ್ದೇನೆ. ನಿಮ್ಮ ಬೆಂಬಲಿಗರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ನಡ್ಡಾ ಭರವಸೆ ನೀಡಿದ್ದಾರೆ. ಮೋದಿಯವರು ಕೂಡ ಇದೇ ಭರವಸೆ ಕೊಟ್ಟಿದ್ದಾರೆ. ಅಮಿತ್ ಶಾ ಅವರನ್ನು ಭೇಟಿ ಮಾಡಲು ಹೇಳಿದ್ದಾರೆ. ಪ್ರಧಾನಿ ಕಚೇರಿಯಿಂದ ಅಮಿತ್ ಶಾ ಭೇಟಿ ಮಾಡಲು ಹೇಳಿದ್ದಾರೆ. ಸಮಯ ಸಿಕ್ಕರೆ ನಾಳೆಯೊಳಗೆ ಭೇಟಿ ಮಾಡುತ್ತೇನೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ ಎಂದು ತಿಳಿಸಿದರು.