ಡೈಲಿ ವಾರ್ತೆ: 20/Mar/2024

ರಾಮೇಶ್ವರಂ ಕೆಫೆ ಸ್ಫೋಟಕೂ ತಮಿಳುನಾಡಿಗೂ ನಂಟು ಹೇಳಿಕೆ: ಶೋಭಾ ಕರಂದ್ಲಾಜೆ ವಿರುದ್ಧ ಡಿಎಂಕೆ ದೂರು – ತತ್ ಕ್ಷಣ ಕ್ರಮಕ್ಕೆ ಚುನಾವಣ ಆಯೋಗ ಆಗ್ರಹ!

ಬೆಂಗಳೂರು: ಕೇಂದ್ರ ಸಚಿವೆ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಕುರಿತು ಡಿಎಂಕೆ ನೀಡಿರುವ ದೂರಿನ ಕುರಿತು ತತ್ ಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಚುನಾವಣ ಆಯೋಗವು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ಬುಧವಾರ ಸೂಚಿಸಿದ್ದು, ಚುನಾವಣ ಸಮಿತಿಯು ಈ ವಿಷಯದ ಕುರಿತು 48 ಗಂಟೆಗಳ ಒಳಗೆ ಅನುಸರಣೆ ವರದಿಯನ್ನು ಕೇಳಿದೆ.

‘ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಐಇಡಿ ಸ್ಫೋಟದ ಕುರಿತು ತಮಿಳುನಾಡಿ ನಲ್ಲಿ ಟ್ರೈನಿಂಗ್‌ ಪಡೆದು ಬೆಂಗಳೂರಿಗೆ ಬಂದು ಬಾಂಬ್‌ ಇಡುತ್ತಾರೆ ಎಂದು ವಿವಾದಾತ್ಮಕ ಗಂಭೀರ ಆರೋಪ ಮಾಡಿದ್ದ ಶೋಭಾ ಕರಂದ್ಲಾಜೆ ಅವರ ವಿರುದ್ಧ ಡಿಎಂಕೆ ಕ್ರಮ ಕೈಗೊಳ್ಳುವಂತೆ ಕೋರಿತ್ತು. ಚುನಾವಣ ಆಯೋಗಕ್ಕೆ ನೀಡಿದ ದೂರಿನಲ್ಲಿ, ಸಚಿವರ ಹೇಳಿಕೆಯು ತಮಿಳುನಾಡಿನ ಜನರನ್ನು ‘ಉಗ್ರವಾದಿಗಳು’ ಎಂದು ಬಿಂಬಿಸಿದೆ ಎಂದು ಡಿಎಂಕೆ ಹೇಳಿತ್ತು.


ಬೆಂಗಳೂರಿನಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಚಿವೆ ಶೋಭಾ ಕರಂದ್ಲಾಜೆ’ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ತಮಿಳುನಾಡಿನಿಂದ ಬಂದವರು ಇಲ್ಲಿ ಬಾಂಬ್‌ಗಳನ್ನು ಹಾಕುತ್ತಾರೆ, ದೆಹಲಿಯ ಜನರು ‘ಪಾಕಿಸ್ಥಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗುತ್ತಾರೆ ಮತ್ತು ಕೇರಳದಿಂದ ಬರುವ ಜನರು ಆಸಿಡ್ ದಾಳಿಯಲ್ಲಿ ಭಾಗಿಯಾಗಿದ್ದಾರೆ’ ಎಂಬ ಹೇಳಿಕೆ ನೀಡಿದ್ದರು. ತೀವ್ರ ಆಕ್ರೋಶದ ಬಳಿಕ ಬಹಿರಂಗ ಕ್ಷಮೆ ಯಾಚಿಸಿದ್ದರು.
ಮಧುರೈ ಪೊಲೀಸರು “ದ್ವೇಷವನ್ನು ಉತ್ತೇಜಿಸಿದ” ಅಡಿಯಲ್ಲಿ ಶೋಭಾ ಅವರ ಹೇಳಿಕೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.