ಡೈಲಿ ವಾರ್ತೆ: 21/Mar/2024

ಕರಾವಳಿಯಲ್ಲಿ ಕೇರಳ ಗೋವಾ ಮಾದರಿ ಪ್ರವಾಸೋದ್ಯಮದ ಅಭಿವೃದ್ಧಿ ಹಾಗೂ ಆರೋಗ್ಯ, ಶಿಕ್ಷಣ, ರೈಲ್ವೇಯ ಅಭಿವೃದ್ಧಿ – ಜಯಪ್ರಕಾಶ್ ಹೆಗ್ಡೆ

ಬ್ರಹ್ಮಾವರ: ಅಭ್ಯರ್ಥಿ ಘೋಷಣೆಗೆ ಮುನ್ನ ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದು ಸಾಮಾನ್ಯ. ಆಯ್ಕೆಯಾದ ಅನಂತರ ನಾವೆಲ್ಲ ಒಟ್ಟಾಗಿ ಒಂದಾಗಿ ಚುನಾವಣೆ ನಡೆಸುತ್ತೇವೆ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿ ಕೆ.ಜಯಪ್ರಕಾಶ ಹೆಗ್ಡೆ ಹೇಳಿದರು.
ಬ್ರಹ್ಮಾವರದಲ್ಲಿ ಬುಧವಾರ ಅವರು ಮಾಧ್ಯಮ ಮಿತ್ರರೊಂದಿಗೆ ನಡೆಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜಕೀಯದಾಚೆಗೂ ಸ್ನೇಹ ಸಂಬಂಧಗಳು ಬಲವಾಗಿರುತ್ತದೆ. ಸಂಸದನಾಗುವ ಜತೆಗೆ ವಿಧಾನಸಭಾ ಕ್ಷೇತ್ರಕ್ಕೂ ನ್ಯಾಯ ಒದಗಿಸುವೆ. ಉಡುಪಿ ಜಿಲ್ಲೆಯಲ್ಲಿ ಐದು ಕ್ಷೇತ್ರದಲ್ಲಿ ಆಡಳಿತರೂಢ ಕಾಂಗ್ರೆಸ್‌  ಶಾಸಕರಿಲ್ಲ. ಹೀಗಾಗಿ ಮಹತ್ವದ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ ಎನ್ನುವ ಅಭಿಪ್ರಾಯವಿದೆ.
ನಾನು ಸಂಸದನಾಗಿ ಆಯ್ಕೆಯಾದರೆ ಲೋಕಸಭಾ ಕ್ಷೇತ್ರದ ಕೆಲಸಗಳ ಜತೆಗೆ ರಾಜ್ಯ ಸರ್ಕಾರದ ಯೋಜನೆಗಳು, ಬಾಕಿ ಇರುವ ಅಭಿವೃದ್ಧಿ ಕಾರ್ಯಗಳನ್ನು ಪರಿಪೂರ್ಣವಾಗಿ ನಿರ್ವಹಿಸುವೆ ಎಂದರು.

ಉಡುಪಿ ಜಿಲ್ಲೆಯ ರಚನೆ, ವಾರಾಹಿ ಕಾಮಗಾರಿ, ತಾಲ್ಲೂಕುಗಳ ರಚನೆ, ಕಿಂಡಿ ಅಣೆಕಟ್ಟುಗಳ ರಚನೆ, ಡೀಮ್ಡ್‌ ಫಾರೆಸ್ಟ್‌ ಸಮಸ್ಯೆಗಳ ಪರಿಹಾರಕ್ಕೆ ಕ್ರಮ, ಹಕ್ಕುಪತ್ರ ವಿತರಣೆಗೆ ಕ್ರಮ,  ಪ್ರಮುಖ ರೈಲುಗಳ ಸಂಚಾರಕ್ಕೆ ಕ್ರಮ, ಪ್ರಮುಖ ರಸ್ತೆಗಳ ಅಭಿವೃದ್ಧಿ, ಅಡಿಕೆಗೆ ಉತ್ತಮ ಧಾರಣೆ, ಮೀನುಗಾರರಿಗೆ ಡಿಸೇಲ್‌ ನಲ್ಲಿ ಸಬ್ಸಿಡಿ ಹೆಚ್ಚಳ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಜನಪ್ರತಿನಿಧಿ ಆಗುವವರು ಜನರ ಸಮಸ್ಯೆಗಳಿಗೆ ತುರ್ತು ಸ್ಪಂದಿಸುವುದು ಅಗತ್ಯ. ಯಾವ ಸರ್ಕಾರ ಇದ್ದರೂ ಒಳ್ಳೆಯ ಕೆಲಸ ಆಗಬೇಕು, ಪಕ್ಷ ಮುಖ್ಯ ಅಲ್ಲ ಎಂದು ಅವರು ಹೇಳಿದರು.

ಬ್ರಹ್ಮಾವರ ಕೃಷಿ ಕಾಲೇಜಿನ ಪ್ರಾರಂಭದ ಬಗ್ಗೆ ಉತ್ತರಿಸಿದ ಅವರು ಈಗಿರುವ ಡಿಪ್ಲೊಮಾ ಕಾಲೇಜು ಯಥಾ ಪ್ರಕಾರ ಮುಂದುವರಿಯುವುದು. ಕೃಷಿ ಕಾಲೇಜು ಸ್ಥಾಪನೆ ಮತ್ತು ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು. ಮುಂದಿನ ದಿನಗಳಲ್ಲಿ ಈ ಬಗ್ಗೆಯೂ ಗಮನ ನೀಡಲಾಗುವುದು. ಸ್ಥಗಿತ ಗೊಂಡಿರುವ ಕಾಮಗಾರಿಗಳ ಬಗ್ಗೆಯೂ ಗಮನ ಹರಿಸಲಾಗುವುದು ಎಂದು ಅವರು ತಿಳಿಸಿದರು.
ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ ಕೇರಳ ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ರೈಲ್ವೇಯ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುವೆ ಎಂದರು.
ಬಡವರಿಗೆ ಆಯುಷ್ಮಾನ್‌ ಕಾರ್ಡ್‌ನ ಪ್ರಯೋಜನ ತ್ವರಿತಗತಿಯಲ್ಲಿ ಸಿಗುವಂತಾಗಲು ಮತ್ತು  ಎಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಬಳಸುವಂತಾಗಲು ಒತ್ತು ನೀಡುತ್ತೇನೆ. ಮೋದಿ ಅಲೆಗಿಂತಲೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯ ಮಾಡಿ ಗೆಲ್ಲುವುದು ಮುಖ್ಯ. ಯಾರು ಕೆಲಸ ಮಾಡುತ್ತಾರೋ ಅವರನ್ನು ಜನರು ಆಯ್ಕೆ ಮಾಡಬೇಕು. ಕೆಲಸ ಮಾಡಲು ಆಗದವರು ಚುನಾವಣೆಗೆ ನಿಲ್ಲಬಾರದು ಎಂದು ಅವರು ಮನದ ಇಂಗಿತವನ್ನು ಹಂಚಿಕೊಂಡರು. 
ಕುಂದಾಪ್ರ ಕನ್ನಡ ಅಧ್ಯಯನ ಪೀಠ ನಿರ್ಮಿಸಿ ರೂ.1.5 ಕೋಟಿ ಮೀಸಲಿರಿಸುವಲ್ಲಿ ಶ್ರಮಿಸಿದ ಬಗ್ಗೆ ಹೆಮ್ಮೆ ಇದೆ. ಮುಂದೆ ಕುಂದಾಪ್ರ ಕನ್ನಡದ ಬಗ್ಗೆ ವಿಶೇಷ ಆಸಕ್ತಿ ಇರುವ ತಂಡವನ್ನು ರಚಿಸಿ  ಆಯ್ಕೆ ಮಾಡಿ ನೈಜ ಕಾಳಜಿಯ ಜೊತೆಗೆ ಕುಂದಾಪ್ರ ಕನ್ನಡಕ್ಕಾಗಿ ಕೆಲಸ ಮಾಡುವ ಬಗ್ಗೆ ಗಮನ ನೀಡುತ್ತೇನೆ

ಸಂಸದನಾದವವನು ಸಂಸತ್ ನಲ್ಲಿ ಯಾವುದೇ ಭಾಷೆಯಲ್ಲಿ ಮಾತನಾಡಬಹುದು. ಆದರೆ ಕ್ಷೇತ್ರದ ಕೆಲಸಗಳು ಆಗಬೇಕಿದ್ರೆ ಅಧಿಕಾರೊಗಳನ್ನು ಭೇಟಿ ಮಾಡಿ ಸಮರ್ಪಕವಾಗಿ ಕೆಲಸ ಮಾಡಲು ಇಂಗ್ಲಿಷ್, ಹಿಂದಿ ಅತೀ ಅಗತ್ಯವಿರುತ್ತದೆ. ಆಪ್ತ ಕಾರ್ಯದರ್ಶಿ, ಅಧಿಕಾರಿಗಳನ್ನು ಬಳಸಿಕೊಂಡೇ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಎಂದರು.

ಜನಪ್ರತಿನಿಧಿಗಳು ಯಾರೇ ಆಗಲಿ ಯಾರು ಜನರ ಕೆಲಸವನ್ನು ಮಾಡುತ್ತಾರೆ ಅಲ್ಲದೆ ಜನರಿಗೆ ಹತ್ತಿರದಲ್ಲಿ ಸಿಗುತ್ತಾರೆ, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಅವರನ್ನು ಆಯ್ಕೆ ಮಾಡಿ.

ಜಾತಿ ಲೆಕ್ಕಾಚಾರದಲ್ಲಿ ಚುನಾವಣೆ ನಡೆಯುತ್ತಿದೆಯಾ ಎಂದು ಮಾಧ್ಯಮದವರ ಪ್ರೆಶ್ನೆಗೆ ಉತ್ತರಿಸಿದ ಅವರು
ಅಂದು ಆರೋಗ್ಯಕರ ಸ್ಪರ್ಧೆ ಆಗಿತ್ತು ಇಂದು ಸಹ ಆರೋಗ್ಯಕರ ಸ್ಪರ್ಧೆ ಆಗಿದೆ ಜಾತಿ ಲೆಕ್ಕಾಚಾರದಲ್ಲಿ ಯಾರು ಮತ ಹಾಕುವುದಿಲ್ಲ. ಆ ನಿರೀಕ್ಷೆ ಮಾಡುವುದು ತಪ್ಪಾಗಿರುತ್ತದೆ.
ಎಲ್ಲಕ್ಕಿಂತ ಮುಖ್ಯವಾದದ್ದು ಯಾರು ಗೆದ್ದು ಹೋಗುತ್ತಾರೆ ಅಂತವರು ಕೆಲಸ ಮಾಡುವಂತಹ ಮನಸ್ಥಿತಿ ಇರಬೇಕು ಎಂದರು.

ಜನರು ಜನಪ್ರತಿನಿಧಿಗಳನ್ನು ಗೋಬ್ಯಾಕ್ ಎನ್ನುವುದಕ್ಕೆ ಕಾರಣ ಕೇಳಿದ ಮಾಧ್ಯಮಕ್ಕೆ ಉತ್ತರಿಸಿದ ಅವರು
ಯಾರೇ ಆಗಲಿ ಕೆಲಸ ಮಾಡಲು ಆಗದೆ ಇದ್ದಾಗ ಚುನಾವಣೆಗೆ ನಿಲ್ಲಬಾರದು. ಕೇವಲ ನಾಯಕನಾಗಿ ಇರುವುದಕ್ಕೆ ಅಲ್ಲ. ಜನರ ಮತದಿಂದ ಆಯ್ಕೆಯಾದವರು ಜನರ ಕೆಲಸ ಮಾಡುವುದು ಅವರ ಹಕ್ಕು ಆಗಿರುತ್ತದೆ. ಅಲ್ಲದೆ ಅದು ಜನಪ್ರತಿನಿಧಿಯ ಕರ್ತವ್ಯ ಸಹ ಆಗಿರುತ್ತದೆ. ಆದ್ದರಿಂದ ಜನಪ್ರತಿನಿಧಿಗಳು ಎರಡನ್ನು ಕಳೆದು ಕೊಂಡರೆ ಇಂತಹ ಸನ್ನಿವೇಶಗಳು ಎದುರಾಗುತ್ತದೆ ಎಂದು ಜಯಪ್ರಕಾಶ್ ಹೆಗ್ಡೆ ಉತ್ತರಿಸಿದರು.