ಡೈಲಿ ವಾರ್ತೆ: 23/Mar/2024

ಮಂಗಳೂರು: 25 ಲಕ್ಷ ರೂ ಲಂಚ ಬೇಡಿಕೆ – ಮುಡಾ ಕಮೀಷನ‌ರ್ ಲೋಕಾಯುಕ್ತ ಬಲೆಗೆ

ಮಂಗಳೂರು: ಬಿಲ್ಡರ್ ಒಬ್ಬರಿಂದ ಮಹಾನಗರ ಪಾಲಿಕೆಗೆ ಬರೆದುಕೊಟ್ಟ ಜಾಗದ ಟಿಡಿಆರ್ ಮಾಡಿಕೊಡಲು 25 ಲಕ್ಷ ಲಂಚ ಬೇಡಿಕೆಯಿಟ್ಟು ಅದನ್ನು ಸ್ವೀಕರಿಸುತ್ತಿದ್ದಾಗಲೇ ಮೂಡಾ ಕಮಿಷನ‌ರ್ ಮನ್ಸೂರ್ ಆಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಬಿಲ್ಡ‌ರ್ ಒಬ್ಬರು ಮಂಗಳೂರು ತಾಲೂಕು ಕುಡುಪು ಗ್ರಾಮದ ಸರ್ವೇ ನಂ. 57/ಪಿ ರಲ್ಲಿ ಒಟ್ಟು 10.8 ಎಕ್ರೆ ಜಮೀನನ್ನು ಖರೀದಿಸಿದ್ದು, ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಪಚ್ಚನಾಡಿ ಮತ್ತು ಕುಡುಪು ಗ್ರಾಮಗಳ ಸುತ್ತಮುತ್ತ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಘನತ್ಯಾಜ್ಯ ನಿರ್ವಹಣೆಯ ಘಟಕವನ್ನು ಭವಿಷ್ಯದಲ್ಲಿ ವಿಸ್ತರಿಸುವ ಉದ್ದೇಶದಿಂದ ಸದ್ರಿ ಜಮೀನನ್ನು ಟಿ.ಡಿ.ಆ‌ರ್ ನಿಯಮದಡಿ ಖರೀದಿ ಮಾಡುವ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯೊಂದಿಗೆ ಫಿರ್ಯಾದಿದಾರರಿಗೆ ಹಾಗೂ ಜಮೀನಿನ ಈ ಹಿಂದಿನ ಮಾಲಕರಿಗೆ ಪತ್ರ ವ್ಯವಹಾರವಾಗಿತ್ತು. ಅದರಂತೆ ಸದ್ರಿ ಜಮೀನು 2024 ಜನವರಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಹೆಸರಿಗೆ ನೋಂದಣಿಯಾಗಿತ್ತು.
ಬಳಿಕ ಮಹಾನಗರ ಪಾಲಿಕೆಯ ಆಯುಕ್ತರು ಸದ್ರಿ ಜಮೀನಿನ ಟಿ.ಡಿ.ಆರ್ ನೀಡಲು ಮುಡಾ ಆಯುಕ್ತರಿಗೆ ಫೆಬ್ರವರಿ ತಿಂಗಳಲ್ಲಿ ಪತ್ರ ಕಳುಹಿಸಿದ್ದು, ಮುಡಾ ಆಯುಕ್ತರಾದ ಮನ್ಸೂರ್ ಆಲಿರವರು ಸದ್ರಿ ಫೈಲ್ ಅನ್ನು ಪೆಂಡಿಂಗ್ ಇಟ್ಟಿದ್ದರು. ಈ ಬಗ್ಗೆ ಬಿಲ್ಡರ್ ಮುಡಾ ಆಯುಕ್ತರಾದ ಮನ್ಸೂರ್ ಆಲಿ ಅವರ ಬಳಿ ಹೋಗಿ ಮಾತನಾಡಿದಾಗ 25 ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಬಿಲ್ಡರ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಶನಿವಾರ ಮುಡಾ ಆಯುಕ್ತ ಮನ್ಸೂರ್ ಆಲಿಯವರ ಸೂಚನೆಯಂತೆ ಬ್ರೋಕರ್ ಕೊಡಿಯಾಲ್ ಬೈಲ್ ನಿವಾಸಿ ಮಹಮ್ಮದ್ ಸಲೀಂ ಪಿರ್ಯಾದುದಾರರಿಂದ ರೂ. 25,00,000 ಲಂಚದ ಹಣವನ್ನು ಸ್ವೀಕರಿಸುವಾಗಲೇ ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಿದ್ದಾರೆ. ಬಳಿಕ 25 ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುವ ಮೂಡಾ ಆಯುಕ್ತ ಮನ್ಸೂರ್ ಅಲಿರವರನ್ನು ಮತ್ತು ಲಂಚದ ಹಣವನ್ನು ಸ್ವೀಕರಿಸಿದ ಬ್ರೋಕರ್ ಮಹಮ್ಮದ್ ಸಲಿಂ ಅವರನ್ನು ಲೋಕಾಯುಕ್ತ ಅಧಿಕಾರಿಗಳು ದಸ್ತಗಿರಿ ಮಾಡಿದ್ದಾರೆ.