ಡೈಲಿ ವಾರ್ತೆ: 25/Mar/2024
ಮುಸ್ಲಿಂ ಟೋಪಿ ಧರಿಸಿದ ಕಾಗೇರಿ ಫೋಟೋ ವೈರಲ್: ಹೆಗಡೆಯನ್ನು ಟ್ರೋಲ್ ಮಾಡಿದ ವಿರೋಧಿ ಬಣ!
ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಕಾಗೇರಿ ಮತ್ತು ಹಾಲಿ ಸಂಸದ ಅನಂತಕುಮಾರ್ ಹೆಗಡೆ ಬೆಂಬಲಿಗರ ನಡುವೆ ಜಟಾಪಟಿಗಳು ಆರಂಭವಾಗಿವೆ. ಕಾಗೇರಿ ಹಿಂದೂ ವಿರೋಧಿ ಎಂದು ಬಿಂಬಿಸುವ ಫೋಟೋಗಳನ್ನು ಹೆಗಡೆ ಬೆಂಬಲಿಗರು ವೈರಲ್ ಮಾಡಿದ್ದಾರೆ. ಇತ್ತ, ತಾಕತ್ತಿನ ಬಗ್ಗೆ ನೀಡಿದ ಹೇಳಿಕೆಯನ್ನೇ ಮುಂದಿಟ್ಟುಕೊಂಡು ವಿರೋಧಿ ಬಣ ಹೆಗಡೆ ಅವರನ್ನು ಟ್ರೋಲ್ ಮಾಡಿದೆ.
ಹೆಗಡೆ ಅವರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಭಟ್ಕಳ ಹಾಗೂ ಶಿರಸಿ ತಾಲೂಕಿನ ಅನಂತಕುಮಾರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಕಾಗೇರಿ ವಿರುದ್ಧ ವ್ಯಾಪಕ ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ, ಕಾಗೇರಿ ಅವರು 2013 ರಲ್ಲಿ ಶಿರಸಿಯ ಕಸ್ತೂರ ಬಾ ನಗರದಲ್ಲಿ ಮುಸ್ಲಿಮರ ಇಫ್ತಾರ ಕೂಟದಲ್ಲಿ ಭಾಗಿಯಾಗಿ ಮುಸ್ಲಿಂ ಟೋಪಿ ಧರಿಸಿದ ಫೋಟೋಗಳನ್ನು ಧರಿಸಿ ಆಹಾರ ಸೇವಿಸಿದ್ದರು. ಈ ವೇಳೆ ತೆಗೆದ ಫೋಟೋಗಳನ್ನು ಹೆಗಡೆ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ.
2013 ರಲ್ಲಿ ಶಿರಸಿಯ ಕಸ್ತೂರ ಬಾ ನಗರದಲ್ಲಿ ಮುಸ್ಲಿಮರ ಇಫ್ತಾರ ಕೂಟದಲ್ಲಿ ಮುಸ್ಲಿಂ ಟೋಪಿ ಧರಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ
ಅನಂತಕುಮಾರ್ ಹೆಗಡೆ ಟ್ರೋಲ್:
ಕಾಗೇರಿ ಅವರ ಫೋಟೋಗಳು ವೈರಲ್ ಆಗುತ್ತಿದ್ದಂತೆ ಸಂಸದ ಅನಂತ ಕುಮಾರ್ ಹೆಗಡೆ ಕುರಿತ ವಿಡಿಯೋ ಟ್ರೋಲ್ ಮೂಲಕ ವೈರಲ್ ಆಗಲು ಆರಂಭವಾಗಿದೆ. ಮಾ.4 ರಂದು ಭಟ್ಕಳದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಹೆಗಡೆ ನೀಡಿದ ಹೇಳಿಕೆಯನ್ನು ಮುಂದಿಟ್ಟುಕೊಂಡು ವಿರೋಧಿಗಳು ಟ್ರೋಲ್ ಮಾಡಿದ್ದಾರೆ.
ಸಂಸದನಾಗುವುದು ಸುಲಭದ ಮಾತಲ್ಲ, ಧಮ್ ಇದ್ರೆ ಈ ಖುರ್ಚಿಯಲ್ಲಿ ಕುಳಿತುಕೊಳ್ಳಿ ಎಂದು ಹೇಳಿ ಹೆಗಡೆ ಅವರು ಕುರ್ಚಿಯನ್ನು ವೇದಿಕೆ ಮುಂದಿಟ್ಟಿದ್ದರು. ಅದರಂತೆ, ಸಂಸದ ಕುರ್ಚಿಯಲ್ಲಿ ಕುಳಿತುಕೊಳ್ಳಲು ಕಾಗೇರಿ ಅವರು ಬೈಕ್ ಮೇಲೇರಿ ಹೋಗುತ್ತಿದ್ದಾರೆ ಎಂದು ಟ್ರೋಲ್ ಮಾಡಲಾಗಿದೆ. ಹೆಗಡೆಯವರ ಧಮ್ ಹೇಳಿಕೆಯ ವಿಡಿಯೋಗೆ, “ದಾರಿ ಬಿಡ್ರೋ” ಎಂದು ಹೇಳಿ ಕಾಗೇರಿ ಅವರು ಬೈಕ್ ಮೇಲೆ ಕುಳಿತುಕೊಂಡು ಹೋಗುವ ವಿಡಿಯೋವನ್ನು ಎಡಿಟ್ ಮಾಡಿ ವೈರಲ್ ಮಾಡಲಾಗಿದೆ.