ಡೈಲಿ ವಾರ್ತೆ: 29/Mar/2024

ಖಾಲಿ ಹೊಟ್ಟೆಗೆ ಕಪ್ಪು ಒಣದ್ರಾಕ್ಷಿ ತಿನ್ನುವುದರಿಂದ ಅರೋಗ್ಯಕ್ಕೆ ಪ್ರಯೋಜನಗಳು

ಆರೋಗ್ಯಕ್ಕಾಗಿ ಕೆಲವು ಒಣ ಹಣ್ಣುಗಳು ಹಾಗೂ ಬೀಜಗಳನ್ನು ಸೇವನೆ ಮಾಡಿದರೆ ಒಳ್ಳೆಯದು.ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಲಾಭ ಅಧಿಕ. ಒಣ ಬೀಜಗಳು ಹಾಗೂ ಹಣ್ಣುಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವುದು ತಿಳಿದಿರುವಂತಹ ವಿಚಾರ. ಇವುಗಳನ್ನು ಯಾವ ಸಮಯದಲ್ಲಿ, ಎಷ್ಟು ಪ್ರಮಾಣದಲ್ಲಿ, ಹೇಗೆ ಬಳಕೆ ಮಾಡಬೇಕು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಒಣ ಹಣ್ಣುಗಳಲ್ಲಿ ಒಣ ದ್ರಾಕ್ಷಿಯು ಒಂದು. ಇದರಲ್ಲಿ ಹಲವಾರು ಬಗೆಯ ಪೋಷಕಾಂಶಗಳಿದ್ದು, ಆರೋಗ್ಯಕ್ಕೆ ತುಂಬಾ ಲಾಭಕಾರಿ.

ಖಾಲಿ ಹೊಟ್ಟೆಗೆ ಕಪ್ಪು ಒಣದ್ರಾಕ್ಷಿ ತಿನ್ನುವುದರಿಂದ, ತನ್ನಿಂತಾನೆ ಆರೋಗ್ಯ ವೃದ್ಧಿಯಾಗುವುದು!

ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಆಗ ಇನ್ನಷ್ಟು ಪರಿಣಾಮಕಾರಿ ಆಗಿ ಕೆಲಸ ಮಾಡುವುದು. ತೂಕ ಇಳಿಸಲು ಬಯಸುವವರು ಹೆಚ್ಚಾಗಿ ಉಪಾಹಾರದಲ್ಲಿ ಒಣ ಹಣ್ಣುಗಳು ಹಾಗೂ ಬೀಜಗಳನ್ನು ಬಳಸುವರು. ಇದರಿಂದ ಅವರ ಹೊಟ್ಟೆ ತುಂಬಿದಂತೆ ಆಗುವುದು ಮತ್ತು ದಿನವಿಡಿ ಅವರ ದೇಹಕ್ಕೆ ಶಕ್ತಿ ಕೂಡ ನೀಡುವುದು. ಕಪ್ಪು ದ್ರಾಕ್ಷಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ, ಆಗ ಅದರಿಂದ ಹಲವಾರು ಬಗೆಯ ಆರೋಗ್ಯ ಲಾಭಗಳು ದೇಹಕ್ಕೆ ಸಿಗುವುದು. ಅದು ಯಾವುದೆಂದು ತಿಳಿಯಿರಿ.

ಜೀರ್ಣಕ್ರಿಯೆಗೆ ಒಳ್ಳೆಯದು:
ಕಪ್ಪು ದ್ರಾಕ್ಷಿಯು ಜೀರ್ಣಕ್ರಿಯೆ ಮತ್ತು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಆಹಾರದ ನಾರಿನಾಂಶವಿದ್ದು, ಇದು ಮಲಬದ್ಧತೆ ನಿವಾರಣೆ ಮಾಡಿ, ಆರೋಗ್ಯ ಕಾಪಾಡುವುದು. ಇದರಲ್ಲಿ ನಾರಿನಾಂಶವು ಹೆಚ್ಚಿರುವ ಕಾರಣ ದಿನವಿಡಿ ಹೊಟ್ಟೆ ತುಂಬಿದಂತೆ ಮಾಡುವುದು.

ಪ್ರತಿರೋಧಕ ಶಕ್ತಿ ವೃದ್ಧಿ:
ಕಪ್ಪು ದ್ರಾಕ್ಷಿಯಲ್ಲಿ ವಿಟಮಿನ್ ಸಿ ಉತ್ತಮವಾಗಿದ್ದು, ಇದು ಪ್ರತಿರೋಧಕ ಶಕ್ತಿ ವೃದ್ಧಿಸಲು ಸಹಕಾರಿ. ವಿಟಮಿನ್ ಮತ್ತು ಖನಿಜಾಂಶಗಳು ಅಧಿಕವಾಗಿ ಇರುವ ಒಣ ಹಣ್ಣುಗಳು ರೋಗಗಳನ್ನು ದೂರವಿಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧ:
ಕಪ್ಪು ದ್ರಾಕ್ಷಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶವು ಸಮೃದ್ಧವಾಗಿದ್ದು, ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಆಗ ಇದು ದೇಹವನ್ನು ನಿರ್ವಿಷಗೊಳಿಸಲು ಸಹಕಾರಿ. ಈ ಆ್ಯಂಟಿಆಕ್ಸಿಡೆಂಟ್ ಚರ್ಮದ ಆರೋಗ್ಯ ಕಾಪಾಡಿ, ಹೃದಯದ ಕಾಯಿಲೆಗಳನ್ನು ದೂರವಿಡುವುದು.

ಶಕ್ತಿ ನೀಡುವುದು:
ದೇಹದ ಶಕ್ತಿಗಾಗಿ ಕಬ್ಬಿಣಾಂಶವು ಅಗತ್ಯ. ಕಪ್ಪು ದ್ರಾಕ್ಷಿಯಲ್ಲಿ ಕಬ್ಬಿಣಾಂಶವು ಹೆಚ್ಚಿನ ಪ್ರಮಾಣದಲ್ಲಿದ್ದು, ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ತುಂಬಾ ಲಾಭಕಾರಿ. ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇದ್ದರೆ ಅಥವಾ ರಕ್ತಹೀನತೆ ಸಮಸ್ಯೆ ಇದ್ದರೆ ಆಗ ಒಣದ್ರಾಕ್ಷಿ ಸೇವಿಸಿ.

ಮೂಳೆಗಳ ಆರೋಗ್ಯ:
ಕಪ್ಪು ಒಣ ದ್ರಾಕ್ಷಿಯಲ್ಲಿ ಇರುವಂತಹ ಕ್ಯಾಲ್ಸಿಯಂ ಅಂಶವು ಮೂಳೆಗಳ ಆರೋಗ್ಯವನ್ನು ಕಾಪಾಡುವಲ್ಲಿ ನಿರ್ಣಾಯಕ. ಅಸ್ಥಿರಂಧ್ರತೆ ಸಮಸ್ಯೆಯನ್ನು ಎದುರಿಸುವಂತಹ ಮಹಿಳೆಯರಿಗೆ ಇದು ಒಳ್ಳೆಯ ಪರಿಹಾರ. ಯಾಕೆಂದರೆ ಇದರಲ್ಲಿನ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುವುದು.