ಡೈಲಿ ವಾರ್ತೆ: 01/April/2024
ನಾನು ಇರಬೇಕು ಅಂದ್ರೆ ವರುಣಾದಲ್ಲಿ 60 ಸಾವಿರ ಲೀಡ್ ಕೊಡಿ: ಸಿಎಂ ಸಿದ್ದರಾಮಯ್ಯ!
ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ಇದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸೀಟ್ ಗೆಲ್ಲಿಸಲಿಲ್ಲ ಎಂದರೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾಗುತ್ತೆ ಎಂದು ಶಾಸಕ ಗುಬ್ಬಿ ಶ್ರೀನಿವಾಸ್ ಹೇಳಿದ್ದು ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಹೆಚ್ಚು ಸ್ಥಾನ ಗೆಲ್ಲದಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಡಬೇಕಾ? ಎನ್ನುವ ಬಗ್ಗೆ ಚರ್ಚೆಗಳು ನಡೆದಿವೆ. ಇದರ ಮಧ್ಯೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪರೋಕ್ಷವಾಗಿ ಒಪ್ಪಿಕೊಂಡಂತಿದೆ. ಹೌದು…ನಾನು ಇರಬೇಕು ಅಂದ್ರೆ ವರುಣದಲ್ಲಿ 60 ಸಾವಿರ ಲೀಡ್ ಕೊಡಿ ಎಂದು ಹೇಳಿದ್ದು, ಇದು ರಾಜ್ಯ ರಾಜಕಾರಣದಲ್ಲಿ ನಾನಾ ಚರ್ಚೆಗೆ ಗ್ರಾಸವಾಗಿದೆ. ಇದರೊಂದಿಗೆ ಸಿದ್ದರಾಮಯ್ಯನವರಿಗೆ ಸಿಎಂ ಕುರ್ಚಿಯಿಂದ ಕೆಳಗಿಳಿಸುತ್ತಾರೆ ಎನ್ನುವ ಆತಂಕ ಇದ್ಯಾ ಎನ್ನುವ ಪ್ರಶ್ನೆಗಳು ಉದ್ಭವಿಸಿದೆ.
ಮೈಸೂರಿನ ವರುಣಾ ಕ್ಷೇತ್ರದ ಬಿಳಿಗೆರೆ ಗ್ರಾಮದಲ್ಲಿ ಇಂದು (ಏಪ್ರಿಲ್ 01) ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ವಿಧಾನಸಭೆ ಚುನಾವಣೆಯಲ್ಲಿ 48 ಸಾವಿರ ಮತಗಳಿಂದ ಗೆಲ್ಲಿಸಿದ್ದೀರಿ. ಈಗ(ಲೋಕಸಭೆ ಚುನಾವಣೆ) ವರುಣ ಕ್ಷೇತ್ರದಲ್ಲಿ 60 ಸಾವಿರ ಮತಗಳ ಲೀಡ್ ಕೊಡಿ. ಆಗ ನನ್ನ ಯಾರು ಮುಟ್ಟಲು ಆಗಲ್ಲ, ನಾನು ಇರಬೇಕಾ ಬೇಡ್ವಾ? ನಾನು ಇರಬೇಕು ಅಂದರೆ ವರುಣದಲ್ಲಿ 60 ಸಾವಿರ ಲೀಡ್ ಕೊಡಿ ಎಂದು ಅಚ್ಚರಿ ಹೇಳಿಕೆ ನೀಡಿದರು.