ಡೈಲಿ ವಾರ್ತೆ: 01/April/2024
ಸಾಮಾಜಿಕ ಹೋರಾಟಗಾರ, ಆರ್ ಟಿ ಐ ಕಾರ್ಯಕರ್ತ, ಪದ್ಮನಾಭ ಸಾವಂತರ ಸಾವಿನ ಸುತ್ತ ಅನುಮಾನಗಳು ವ್ಯಕ್ಯವಾಗಿದ್ದು, ಇದು ಆತ್ಮಹತ್ಯೆ ಅಲ್ಲ, ವ್ಯವಸ್ಥಿತ ಕೊಲೆ, ಚಂದ್ರಪ್ರಕಾಶ್ ಶೆಟ್ಟಿ.
ಬಂಟ್ವಾಳ : ಸಾಮಾಜಿಕ ಹೋರಾಟಗಾರ, ಆರ್ ಟಿ ಐ ಕಾರ್ಯಕರ್ತ, ದ.ಕ.ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಪದ್ಮನಾಭ ಸಾವಂತರ ಸಾವಿನ ಸುತ್ತ ಅನುಮಾನಗಳು ವ್ಯಕ್ಯವಾಗಿದ್ದು, ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಪ್ರಕರಣ ಎಂದು ಕಂಡು ಬಂದರೂ ಇದೊಂದು ವ್ಯವಸ್ಥಿತ ಕೊಲೆಯಾಗಿದೆ ಎಂಬ ಸಂಶಯವಿದೆ ಎಂದು ಕೆಪಿಸಿಸಿ ಸದಸ್ಯ, ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಹೇಳಿದರು.
ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು
ಪದ್ಮನಾಭ ಸಾಮಂತ ಅವರು ಆರ್.ಟಿ.ಐ ಕಾರ್ಯಕರ್ತನಾಗಿದ್ದು, ಬಂಟ್ವಾಳದಲ್ಲಿ ನಡೆದ ಅನೇಕ ಅಕ್ರಮ ಹಾಗೂ ಭ್ರಷ್ಟಾಚಾರ ಸೇರಿದಂತೆ ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ದ ಹೋರಾಟ ಹಾಗೂ ಅನೇಕ ಅಕ್ರಮಗಳನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದರು, ಕಳೆದ ಬಾರಿಯ ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದ ಅಕ್ರಮ ಸಕ್ರಮ ಸಮಿತಿಯ ಭೂ ಅವ್ಯವಹಾರವನ್ನು ಭೇದಿಸಿದ್ದು ಸುಮಾರು 83 ಮಂದಿಗೆ ನೋಟೀಸ್ ಜಾರಿ ಕೂಡಾ ಆಗಿದೆ, ಸಿಮೆಂಟ್ ಹಗರಣ, ಬಂಟ್ವಾಳ ಬೈಪಾಸ್ ಬಳಿ ನಿರ್ಮಾಣಗೊಂಡ ಖಾಸಗಿ ಕಟ್ಟಡ, ಇತರ ಅನಧಿಕೃತ ಕಟ್ಟಡಗಳು, ಬಾಕ್ಸೈಟ್ ದಂಧೆ ಮೊದಲಾದ ವಿಚಾರಗಳಲ್ಲಿ ಕೆಲವರೊಂದಿಗೆ ದ್ವೇಷ, ವಿರೋಧವನ್ನು ಕಟ್ಟಿಕೊಂಡಿದ್ದರು.
ಹಾಗಾಗಿ ಸುಮಾರು ಸಮಯದ ಹಿಂದೆ ಬೈಕಿನಲ್ಲಿ ಬಂದು ಕೊಲೆ ಮಾಡಲು ಹೊಂಚು ಹಾಕಿದ್ದರು. ಬೆದರಿಕೆ ಕರೆಗಳು ಬಂದಿದ್ದು ಈ ಬಗ್ಗೆ ಪೊಲೀಸ್ ಠಾಣೆಗಳಿಗೆ ಅನೇಕ ದೂರುಗಳನ್ನು ಕೂಡಾ ನೀಡಿದ್ದರು. ಇದರ ಮುಂದುವರಿದ ಭಾಗವಾಗಿ ಈ ವ್ಯವಸ್ಥಿತ ಕೊಲೆಯಾಗಿದೆ ಎಂದು ಆರೋಪಿಸಿದರು.
ಪದ್ಮನಾಭ ಸಾವಂತನ ಕೊಲೆ ಯತ್ನ ನಡೆದಿದೆ, ಬೇರೆ ಬೇರೆ ಇಲಾಖೆಗಳ ಮೂಲಕ ಬೆದರಿಸುವ ಕೆಲಸವೂ ಆಗಿದೆ, ಇತ್ತೀಚೆಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ವಂಚನೆ ಆರೋಪದಲ್ಲಿ ದೂರು ದಾಖಲಿಸಿರುವುದು ಮತ್ತು ಇದರ ಬೆನ್ನಲ್ಲೇ ಈತನ ಮೃತದೇಹ ನೇಣು ಬಿಗಿದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಇದೊಂದು ಪೂರ್ವ ನಿಯೋಜಿತ ಕೊಲೆ ಎಂಬುದಕ್ಕೆ ಪುಷ್ಟಿ ನೀಡುತ್ತದೆ ಎಂದರು.
ಪದ್ಮನಾಭ ಸಾವಂತ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯೇ ಅಲ್ಲ, ಒಂದು ವೇಳೆ ಆತ್ಮಹತ್ಯೆ ಮಾಡುತ್ತಿದ್ದರೂ ತನ್ನ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಖಂಡಿತವಾಗಿಯೂ ಬಹಿರಂಗಪಡಿಸುತ್ತಿದ್ದರು.
ಸಾವಂತನ ವಿರುದ್ಧ ದೂರು ನೀಡಿದಲ್ಲಿಂದ ಹಿಡಿದು ಆತ ಬಯಲಿಗೆಳೆದ ಅಕ್ರಮಗಳಿಂದಾಗಿ ಕೊಲೆಯತ್ನ, ಬೆದರಿಕೆ ಈ ಎಲ್ಲಾ ಆಯಾಮಗಳನ್ನು ಕೇಂದ್ರೀಕರಿಸಿ ಸಮರ್ಪಕ ತನಿಖೆ ನಡೆಸುವಂತೆ
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ರಾಜ್ಯ ಗೃಹ ಇಲಾಖೆಯನ್ನು ಮಾಡಬೇಕು ಎಂದು ಒತ್ತಾಯ ಮಾಡುತ್ತೇವೆ ಎಂದರು.
ಬಂಟ್ವಾಳದ ಪ್ರಕರಣವೊಂದರ ವಿಚಾರವಾಗಿ ಬೆದರಿಕೆಯ ಹಿನ್ನೆಲೆಯಲ್ಲಿ ಪೊಲೀಸ್ ಮಹಾ ನಿರ್ದೇಶಕರಿಗೆ ಹಿಂದೆಯೇ ದೂರನ್ನು ಕೂಡ ಸಾವಂತ ಅವರು ನೀಡಿದ್ದರು ಎಂದ ಚಂದ್ರಪ್ರಕಾಶ್ ಶೆಟ್ಟಿ ಪೋಲೀಸರು ಕೂಡಲೇ ಕ್ರಮ ಕೈಗೊಂಡು ತನಿಖೆ ಪ್ರಾರಂಭ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡುತ್ತೇವೆ ಎಂದು ತಿಳಿಸಿದರು.
ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೊಡ್ರಿಗಸ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ .
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಶೆಟ್ಟಿ, ಜಿ.ಪಂ.ಮಾಜಿ ಸದಸ್ಯ ಪದ್ಮಸೇಖರ್ ಜೈನ್ , ಪಕ್ಷ ಪ್ರಮುಖರಾದ ವೆಂಕಪ್ಪ ಪೂಜಾರಿ, ಪ್ರಶಾಂತ್ ಕುಲಾಲ್, ಸುರೇಶ್ ಜೋರಾ, ಪ್ರವೀಣ್ ರೋಡ್ರಿಗಸ್, ಚಂದ್ರಹಾಸ ನಾಯ್ಕ್
ಉಪಸ್ಥಿತರಿದ್ದರು.