ಡೈಲಿ ವಾರ್ತೆ: 03/April/2024

ಸಿಎಂ, ರಾಜ್ಯಪಾಲರ ಹೆಸರಿನಲ್ಲಿ ಶಿಕ್ಷಕಿಗೆ 4 ಕೋಟಿ ರೂ. ವಂಚನೆ: ನಾಲ್ವರನ್ನು ಬಂಧಿಸಿದ ಸಿಸಿಬಿ ಪೊಲೀಸರು!

ಬೆಂಗಳೂರು: ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಹೆಸರಿನಲ್ಲಿ ನಕಲಿ ಸಹಿ ಬಳಸಿ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದ ಸದಸ್ಯತ್ವ ಕೊಡಿಸುವುದಾಗಿ ಚಿತ್ರಕಲಾ ಶಿಕ್ಷಕಿಗೆ ಬರೋಬ್ಬರಿ 4.10 ಕೋಟಿ ರೂ.ವಂಚಿಸಿದ್ದ ಸರ್ಕಾರಿ ನೌಕರ ಸೇರಿ ನಾಲ್ವರು ಆರೋಪಿಗಳನ್ನು ಸಿಸಿಬಿಯ ಆರ್ಥಿಕ ಅಪರಾಧ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಬೆಂಗಳೂರಿನ ತಾವರೆಕೆರೆ ನಿವಾಸಿ ರಿಯಾಜ್‌ ಅಹ್ಮದ್‌ (41), ಮಲ್ಲೇಶ್ವರದ ನಿವಾಸಿ ಯೂಸುಫ್ ಸುಬ್ಬೆಕಟ್ಟೆ (47), ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ರುದ್ರೇಶ್‌ (35) ಮತ್ತು ಚಿಕ್ಕಮಗಳೂರು ಕಳಸ ತಾಲೂಕಿನ ತೋಟಗಾರಿಕಾ ನಿರ್ದೇಶಕರ ಕಚೇರಿ ಸಿಬ್ಬಂದಿ ಸಿ.ಚಂದ್ರಪ್ಪ (44) ಎಂಬುವರನ್ನು ಬಂಧಿಸಲಾಗಿದೆ.
ತಲೆಮರೆಸಿಕೊಂಡಿರುವ ಚೇತನ್‌, ಶಂಕರ್‌, ಮಹೇಶ್‌,ಹರ್ಷವರ್ಧನ್‌ಗಾಗಿ ಶೋಧ ನಡೆಯುತ್ತಿದೆ.

ಆರೋಪಿಗಳು ಕಲಬುರಗಿ ಮೂಲದ ಶಾಲೆಯೊಂದರ ಚಿತ್ರಕಲಾ ಶಿಕ್ಷಕಿ ನೀಲಮ್ಮ ಎಂ.ಬೆಳಮಗಿ ಅವರಿಗೆ ಕೆಪಿಎಸ್‌ಸಿ ಸದಸ್ಯತ್ವ ಸ್ಥಾನ ಕೊಡಿಸುವುದಾಗಿ 4.10 ಕೋಟಿ ರೂ. ಪಡೆದು ವಂಚಿಸಿದ್ದರು ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಪ್ರಧಾನಿ ಸಹೋದರ ಪರಿಚಯ ಎಂದಿದ್ದ ಆರೋಪಿ
ಆರೋಪಿಗಳ ಪೈಕಿ ರಿಯಾಜ್‌ ಅಹ್ಮದ್‌, ಸರ್ಕಾರಿ ನೌಕರರ ವರ್ಗಾವಣೆ ದಂಧೆಯ ಮಧ್ಯವರ್ತಿಯಾಗಿದ್ದಾನೆ ಎಂದು ಹೇಳಲಾಗಿದೆ. ಯೂಸುಫ್ ಸುಬ್ಬೆಕಟ್ಟೆ ಮಲ್ಲೇಶ್ವರದಲ್ಲಿ ಅಕ್ಯೂರೆಟ್‌ ಟೈಂ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಚೇರಿ ನಡೆಸುತ್ತಿದ್ದ. ಚಂದ್ರಪ್ಪ ಸರ್ಕಾರಿ ನೌಕರನಾಗಿದ್ದಾನೆ. ಇನ್ನು ರುದ್ರೇಶ್‌, ಈ ಹಿಂದೆ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ. ಜತೆಗೆ ಕರವೇ ಅಧ್ಯಕ್ಷ ಎಂದು ಹೇಳಿಕೊಂಡಿದ್ದ ಎಂಬುದು ಗೊತ್ತಾಗಿದೆ. ಇನ್ನು ವಂಚನೆಗೊಳಗಾದ ಚಿತ್ರಕಲಾ ಶಿಕ್ಷಕಿಗೆ ಪರಿಚಯಸ್ಥರೊಬ್ಬರ ಮೂಲಕ ರಿಯಾಜ್‌ ಪರಿಚಯವಾಗಿದೆ. ಈ ವೇಳೆ ಆರೋಪಿ, “ತನಗೆ ಪ್ರಧಾನಿ ನರೇಂದ್ರ ಮೋದಿ ಸಹೋದರನ ಪರಿಚಯವಿದೆ ಎಂದು ಹೇಳಿಕೊಂಡು, ಕೆಪಿಎಸ್‌ ಸಿಯಲ್ಲಿ ಸದಸ್ಯತ್ವ ಕೊಡಿಸುತ್ತೇನೆ. ಈ ಕುರಿತು ಅರ್ಜಿ ಸಲ್ಲಿಸುವಂತೆ ಹೇಳಿದ್ದ. ಆಗ, ಇತರೆ ಆರೋಪಿಗಳು ದೂರುದಾರರನ್ನು ಭೇಟಿಯಾಗಿ, ಅದಕ್ಕೆ 15-20 ಕೋಟಿ ರೂ. ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಅಲ್ಲದೆ, ಮಲ್ಲೇಶ್ವರದಲ್ಲಿರುವ ಯೂಸುಫ್ ಸುಬ್ಬೆಕಟ್ಟೆಯ ಕಚೇರಿಗೆ ದೂರುದಾರ ಮಹಿಳೆಯನ್ನು ಕರೆಸಿಕೊಂಡಿದ್ದ ಆರೋಪಿಗಳು, ತಮ್ಮ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಂತ-ಹಂತವಾಗಿ 4.10 ಕೋಟಿ ರೂ. ವರ್ಗಾವಣೆ ಮಾಡಿದ್ದರು. ಆ ನಂತರ ಆರೋಪಿಗಳು, ಮುಖ್ಯಮಂತ್ರಿಗಳು, ರಾಜ್ಯಪಾಲರ ಹೆಸರಿನ ನಕಲಿ ನೇಮಕಾತಿ ಆದೇಶ ಪ್ರತಿ ನೀಡಿ ವಂಚಿಸಿದ್ದರು. ಈ ಸಂಬಂಧ ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಬಳಿಕ ತಾಂತ್ರಿಕ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಆಯುಕ್ತರು ಹೇಳಿದರು. ಸಿಸಿಬಿ ಇನ್‌ಸ್ಪೆಕ್ಟರ್‌ ಪ್ರವೀಣ್‌ ಹೆಲಿಗಾರ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

40 ಲಕ್ಷ ರೂ., 4 ಮೊಬೈಲ್‌ ಜಪ್ತಿ:
ಮಲ್ಲೇಶ್ವರದಲ್ಲಿರುವ ಆಕ್ಯೂರೇಟ್‌ ಟೈಂ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಚೇರಿಗೆ ಕರೆಸಿಕೊಂಡಿದ್ದ ಮಹಿಳೆಯನ್ನು ಆರೋಪಿಗಳು, ಆಕೆಯನ್ನು ನಂಬಿಸಲು ಮುಖ್ಯಮಂತ್ರಿಗಳ ಟಿಪ್ಪಣಿ, ನಡಾವಳಿ ಹಾಗೂ ನಕಲಿ ಸಹಿ ಮಾಡಿರುವ ಪತ್ರ ಹಾಗೂ ರಾಜ್ಯಪಾಲರ ಹೆಸರಿನಲ್ಲಿ ಸೃಷ್ಟಿಸಿದ್ದ ಸುಳ್ಳು ರಾಜ್ಯಪತ್ರ ತೋರಿಸಿ ವಂಚಿಸಿದ್ದರು. ಸದ್ಯ ಬಂಧಿತರಿಂದ 40 ಲಕ್ಷ ರೂ.ನಗದು, 4 ಮೊಬೈಲ್‌ ವಶಪಡಿಸಿಕೊಳ್ಳ ಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಪೊಲೀಸ್‌ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ದಯಾನಂದ್‌ ಮಾಹಿತಿ ನೀಡಿದರು.