ಡೈಲಿ ವಾರ್ತೆ: 03/April/2024
ಬೆಕ್ಕಿನ ರಕ್ಷಣೆಗೆ ಬಾವಿಗೆ ಇಳಿದು ಆಪತ್ತಿನಲ್ಲಿ ಸಿಲುಕಿಕೊಂಡ ಕ.ಸಾ.ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ: ಬಾವಿಯಿಂದ ಮೇಲಕ್ಕೆ ಎತ್ತಿ ಅಡಿಗರ ಜೀವ ರಕ್ಷಿಸಿದ ಜೀವನ್ ಮಿತ್ರ ನಾಗರಾಜ್ ಪುತ್ರನ್!
ಕೋಟ: ಒಂದು ಜೀವಿಯ ಬಗೆಗಿನ ಮರುಕದಿಂದ ಒಂದೂವರೆ ಗಂಟೆ ಕಾಲ ಬಾವಿಯೊಳಗೆ ದಿಗ್ಬಂಧನ ಅನುಭವಿಸಬೇಕಾದ ದುರ್ಭರ ಪ್ರಸಂಗವೊಂದರ ಕಹಿ ಅನುಭವ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಉಂಟಾಗಿದೆ. ಕೋಟ ಪರಿಸರದ ಜೀವನ್ ಮಿತ್ರ ಎಂದೇ ಜನಪ್ರಿಯರಾದ ನಾಗರಾಜ ಪುತ್ರನ್ ಮತ್ತಿತರರ ಸಕಾಲಿಕ ನೆರವಿನಿಂದ ಪ್ರಕರಣ ಸುಖಾಂತ್ಯಗೊಂಡಿದೆ.
ಕ ಸಾ ಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರ ಕೋಟದ ಮಣೂರು – ಕೊಯಿಕೂರು ರಸ್ತೆಯಲ್ಲಿನ ನಿವಾಸದಲ್ಲಿ ಈ ಅಕಸ್ಮಾತ್ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಎಂದಿನಂತೆ ರಾತ್ರಿ ತಮ್ಮ ಸಾಹಿತ್ಯಾಧ್ಯಯನ, ಊಟ ಮುಗಿಸಿ ಅಡಿಗರು 11.30ಕ್ಕೆ ಇನ್ನೇನು ಮಲಗಲು ಅಣಿಯಾಗುತ್ತಿದ್ದರು. ದೂರದಲ್ಲೆಲ್ಲೋ ಮನೆಯ ಮುದ್ದು ಬೆಕ್ಕಿನ ಆರ್ತನಾದ ಇವರನ್ನು ತಡೆದು ನಿಲ್ಲಿಸಿತು. ಆಲಿಸಲಾಗಿ, ಬೆಕ್ಕಿನ ಕೂಗು ತಮ್ಮ ಮನೆಯ ಬಾವಿಯೊಳಗಿಂದಲೇ ಬರುವುದು ಎಂದು ತಿಳಿಯಿತು. ನೋಡಲಾಗಿ, ಮುದ್ದಿನ ಬೆಕ್ಕು ಅದುಹೇಗೋ ಬಾವಿಗೆ ಬಿದ್ದುಬಿಟ್ಟಿದೆ. ಜೀವರಕ್ಷಣೆಗಾಗಿ ಮೊರೆಯಿಡುತ್ತಿದೆ. ಈ ದೃಶ್ಯ ನೋಡಿದ ಸುರೇಂದ್ರ ಅಡಿಗರ ಹೆಂಗರುಳು ಚುರಕ್ ಎಂದಿತು. ನೀರವ ರಾತ್ರಿಯ ಸಮಯ, ತಮ್ಮ ಪ್ರಾಯ ಯಾವುದೂ ಗಮನಕ್ಕೆ ಬರಲಿಲ್ಲ. ಬೆಕ್ಕನ್ನು ರಕ್ಷಿಸಬೇಕು ಎಂಬುದೇ ಗುರಿಯಾಯಿತು. ಸರಿ, ತಡ ಮಾಡದೇ ಒಬ್ಬರೇ 30 ಅಡಿ ಆಳದ ಬಾವಿಗೆ ಇಳಿದೇ ಬಿಟ್ಟರು! ಹಗ್ಗದ ಸಹಾಯದಿಂದ ಕೆಳಗಿಳಿದು, ಬೆಕ್ಕನ್ನು ಹೇಗೋ ಬಚಾವು ಮಾಡಿದರು. ಆಗಲೇ ಅವರಿಗೆ ಅರಿವಾದದ್ದು, ತಾವು ಭಾರೀ ಆಳದ ಬಾವಿಯಲ್ಲಿರುವುದು. ಒಮ್ಮೆಲೇ ದಿಗಿಲುಗೊಂಡ ಅಡಿಗರಿಗೆ ಮೇಲೆ ಹೇಗೆ ಬರುವುದು ಎಂಬುದೇ ತಿಳಿಯದಾಯಿತು. ರಾತ್ರಿ 11.30 ರ ಸಮಯ. ಊರಿಗೆ ಊರೇ ಮಲಗಿದೆ. ಆಳವಾದ ಬಾವಿಯಲ್ಲಿ ಕೂಗಿಕೊಂಡರೂ ಶಬ್ದ ಮೇಲೆ ಬಾರದು. ಮನೆಯಲ್ಲಿದ್ದ ಅಡಿಗರ ಪತ್ನಿಗೆ ಇವರೆಲ್ಲಿಗೆ ಹೋಗಿದ್ದಾರೆ ಎಂಬುದೂ ತಿಳಿಯದು. ಬಹಿರ್ದೆಸೆಗೆ ಹೋಗಿರಬಹುದು ಎಂದು ಕಾದರು. ಗಂಡನ ಸುಳಿವಿಲ್ಲ. ಗಾಬರಿಯಿಂದ ಅಂಗಳಕ್ಕೆ ಬಂದಾಗ ಬಾವಿಯೊಳಗಿಂದ ಅಡಿಗರ ಕೂಗು ಕೇಳಿಸಿತು. ಸ್ವಲ್ಪ ಮೊದಲು ಅಲ್ಲಿಂದಲೇ ಬೆಕ್ಕಿನ ಕೂಗು ಕೇಳಿಸಿದ್ದರಿಂದಲೇ ಸುರೇಂದ್ರ ಅಡಿಗರು ಬಾವಿ ಇಳಿದದ್ದು. ಇದೀಗ ಅಲ್ಲಿಂದಲೇ ಅಡಿಗರ ಕೂಗು ಕೇಳಿದ ಪತ್ನಿ ಗಾಬರಿಗೊಂಡರು. ಅಡಿಗರು ಬಾವಿ ಇಳಿದು ಈಗಾಗಲೇ ಒಂದೂವರೆ ಗಂಟೆಯಾಗಿತ್ತು. ಹಗ್ಗದ ಸಹಾಯದಿಂದ ಮುಳುಗದೆ ನಿಂತಿದ್ದು, ಸಹಾಯಕ್ಕಾಗಿ ಪತ್ನಿಯನ್ನು ಕೂಗಿದ್ದರು. ಸುದ್ದಿ ಅಕ್ಕಪಕ್ಕದವರಿಗೆ ಹರಡಿತು. ಮಧ್ಯರಾತ್ರಿ ಈ ಭಯಾನಕ ವಿಷಯ ತಿಳಿದು ಸಾಹಿತ್ಯಾಭಿಮಾನಿಗಳು, ಹಿತೈಷಿಗಳು ಬಾವಿ ಕಟ್ಟೆಯಲ್ಲಿ ನೆರೆದರು. ಅಗ್ನಿಶಾಮಕ ಠಾಣೆಗೂ ಕರೆ ಹೋಯಿತು. ಅದೇ ವೇಳೆ ಮಧ್ಯ ರಾತ್ರಿ ಎಂಬುದನ್ನೂ ಲೆಕ್ಕಿಸದೆ ಧಾವಿಸಿ ಬಂದದ್ದೇ ಆಪತ್ಬಾಂಧವ ಜೀವನ್ ಮಿತ್ರ ನಾಗರಾಜ ಪುತ್ರನ್. ತಕ್ಷಣ ಕಾರ್ಯಾಚರಣೆಗಿಳಿದ ಅವರು ಅಲ್ಲಿ ನೆರೆದವರ ಸಹಾಯದಿಂದ ಹಗ್ಗಕ್ಕೆ ಏಣಿ, ಹೆಡಿಗೆ ಕಟ್ಟಿ ಬಾವಿಗೆ ಇಳಿಬಿಟ್ಟು, ಸುರೇಂದ್ರ ಅಡಿಗರು ಮೇಲೆ ಬರಲು ಸಹಾಯ ಮಾಡಿದರು. ಅಂತೂ ಅಡಿಗರು ಸುರಕ್ಷಿತವಾಗಿ ಬಾವಿಯಿಂದ ಮೇಲೆ ಬಂದಾಗ ನೆರೆದವರೆಲ್ಲ ಆತಂಕ ಸರಿದು ನಿಟ್ಟುಸಿರು ಬಿಟ್ಟರು. ಅಗ್ನಿಶಾಮಕ ದಳದವರಿಗೂ ಬರುವ ಅಗತ್ಯವಿಲ್ಲ ಎಂಬ ಸಂದೇಶ ಕಳಿಸಲಾಯಿತು. ಅಂತೂ ಬೆಕ್ಕು ಮತ್ತು ಬೆಕ್ಕಿನ ಯಜಮಾನರು ಗಟ್ಟಿ ಆಯುಷ್ಯ ನೀಡಿದ ಭಗವಂತನನ್ನು ನೆನೆದು ಸುಖ ನಿದ್ದೆ ಮಾಡಿದರು.
ಅಡಿಗರ ರಕ್ಷಣಾ ಕಾರ್ಯಾಚರಣೆಯಲ್ಲಿ ಜೀವನ್ ಮಿತ್ರ ನಾಗರಾಜ್ ಜೊತೆ ವಸಂತ ಸುವರ್ಣ, ಅಂಬಾರಿ ರಿಕ್ಷಾ ರವಿ, ಸಂದೀಪ್ ಕೊಯಿಕೂರು ಇನ್ನಿತರರು ಸಹಕರಿಸಿದ್ದರು.