ಡೈಲಿ ವಾರ್ತೆ: 11/April/2024
ದಕ್ಷಿಣಕನ್ನಡ: ಎಳನೀರು ಕುಡಿದು ಅಸ್ವಸ್ಥ ಪ್ರಕರಣ – ಫ್ಯಾಕ್ಟರಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ
ಮಂಗಳೂರು: ನಗರದ ಹೊರವಲಯದ ಎಳನೀರು ಫ್ಯಾಕ್ಟರಿಯೊಂದರಿಂದ ತಂದ ಎಳನೀರು ಕುಡಿದು ಕೆಲವರು ಅಸ್ವಸ್ಥರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವರದಿ ಆಧಾರದಲ್ಲಿ ದ.ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ| ತಿಮ್ಮಯ್ಯ ಅವರು ಫ್ಯಾಕ್ಟರಿಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಡಿಎಚ್‌ಒ ‘ಆರೋಗ್ಯ ಇಲಾಖೆ ತಂಡದಿಂದ ಎಳನೀರು ಪ್ಯಾಕ್ಟರಿಗೆ ಭೇಟಿ ನೀಡಿದ್ದೇವೆ. ಸುಮಾರು 15 ಲೀಟರ್ ಎಳನೀರನ್ನು ಪರೀಕ್ಷಾರ್ಥ ಸಂಗ್ರಹಣೆ ಮಾಡಿ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ಮೂರು ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಸ್ವಸ್ಥರಾದ ಮೂರು ಮಂದಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಮಹಿಳೆಯರು ಮತ್ತು 12 ವರ್ಷದ ಮಗು ಸೇರಿದೆ. ಅವರ ಮೋಷನ್ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸುಮಾರು 13 ಮಂದಿ ಈಗಾಗಲೇ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಡಿಎಚ್ಒ ತಿಳಿಸಿದ್ದಾರೆ.