ಡೈಲಿ ವಾರ್ತೆ: 16/April/2024

ಏ.25, 26 ರಂದು ಚಿಕ್ಕಮಗಳೂರಿನ ಹೋಂ ಸ್ಟೇ, ರೇಸಾರ್ಟ್ ಬುಕ್ಕಿಂಗ್‌ ನೀಡಬೇಡಿ: ಮಾಲೀಕರಿಗೆ ಜಿಲ್ಲಾಡಳಿತ ಆದೇಶ

ಚಿಕ್ಕಮಗಳೂರು: ಲೋಕಸಭೆ ಚುನಾವಣೆಗೆ ಏಪ್ರಿಲ್ 26ರಂದು ಮತದಾನ ನಡೆಯಲಿರುವ ಕಾರಣ 25 ಮತ್ತು 26 ರಂದು ಹೋಂ ಸ್ಟೇ, ರೇಸಾರ್ಟ್ ಬುಕಿಂಗ್ಗೆ ಅವಕಾಶ ನೀಡದಂತೆ ಚಿಕ್ಕಮಗಳೂರು ಜಿಲ್ಲೆಯ ಹೋಂ ಸ್ಟೇ, ರೇಸಾರ್ಟ್ ಮಾಲೀಕರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಮತದಾನದ ದಿನ ರಜೆ ಇರುವ ಕಾರಣ ವಾರಾಂತ್ಯದ ರಜೆಯ ಉಪಯೋಗ ಪಡೆದು ಜನರು ಪ್ರವಾಸಕ್ಕೆ ತೆರಳಿದರೆ ಮತದಾನ ಪ್ರಮಾಣ ಕಡಿಮೆಯಾಗಲಿದೆ. ಹೀಗಾಗಿ ಮತದಾನ ಪ್ರಮಾಣ ಹೆಚ್ಚಿಸಲು ಈ ಮೂಲಕ ನೆರವಾಗಬೇಕು ಎಂದು ಹೋಂ ಸ್ಟೇ, ರೇಸಾರ್ಟ್ ಮಾಲೀಕರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಚುನಾವಣೆ ದಿನದಂದೂ ರಜೆ ನೀಡಲಾಗುತ್ತಿದ್ದು, ಹೀಗಾಗಿ ಜಿಲ್ಲಾಡಳಿತ ಸೂಚನೆ ನೀಡಿದೆ. ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಜಿಲ್ಲೆಯ ಹೋಂ ಸ್ಟೆ ಹಾಗೂ ರೇಸಾರ್ಟ್ ಮಾಲೀಕರಿಗೆ ಈಗಾಗಲೇ ಲಿಖಿತ ಸೂಚನೆ ಕಳುಹಿಸಿದ್ದಾರೆ.

ಏಪ್ರಿಲ್ 26ರಂದು ರಾಜ್ಯದ ದಕ್ಷಿಣದ ಜಿಲ್ಲೆಗಳ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಏಪ್ರಿಲ್ 26 ಶುಕ್ರವಾರ ಬರುತ್ತದೆ. ಮರುದಿನ ಶನಿವಾರ ಹಾಗೂ ಅದರ ಮರುದಿನ ಭಾನುವಾರ ಹೇಗೂ ರಜೆ. 3 ದಿನ ರಜೆ ಸಿಕ್ಕಿತೆಂದು ಜನ ಪ್ರವಾಸ ತೆರಳಿದರೆ ಮತದಾನ ಪ್ರಮಾಣ ಕಡಿಮೆಯಾಗಲಿದೆ ಎಂಬ ಆತಂಕ ಚುನಾವಣಾ ಆಯೋಗದ್ದಾಗಿದೆ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ವಾರದ ಮಧ್ಯದಲ್ಲಿ (ಬುಧವಾರ) ಮತದಾನ ನಡೆಸಲಾಗಿತ್ತು. ಇದೀಗ ಲೋಕಸಭೆ ಚುನಾವಣೆ ಶುಕ್ರವಾರ ಬರುತ್ತದೆ.