ಡೈಲಿ ವಾರ್ತೆ: 16/April/2024

ಸಲ್ಮಾನ್ ಖಾನ್‌ ಭೇಟಿಯಾಗಿ ಭರವಸೆ ನೀಡಿದ ಮಹಾರಾಷ್ಟ್ರ ಸಿಎಂ

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ  ಅವರು ಇಂದು ಮಧ್ಯಾಹ್ನ ನಟ ಸಲ್ಮಾನ್ ಖಾನ್  ಅವರನ್ನು ಭೇಟಿಯಾಗಿದ್ದಾರೆ. ಸಿಎಂ ಆಗಮಿಸುತ್ತಿದ್ದಂತೆ ನಟನ ಮನೆಯ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ಎರಡು ದಿನಗಳ ಹಿಂದೆಯಷ್ಟೇ ಮುಂಬೈನ ಬಾಂದ್ರಾದಲ್ಲಿರುವ ನಟನ ಮನೆಯ ಹೊರಗೆ ಗುಂಡಿನ ದಾಳಿ ನಡೆಸಲಾಗಿತ್ತು. ಇದೀಗ ಇಂದು ನಟನ ಮನೆಗೆ ಭೇಟಿ ನೀಡಿದ ಸಿಎಂ, ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ಅನ್ನು ಮುಗಿಸುತ್ತೇನೆ ಎಂದು ಭರವಸೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿಂಧೆ, ಸರ್ಕಾರ ನಿಮ್ಮೊಂದಿಗಿದೆ ಎಂದು ನಾನು ಸಲ್ಮಾನ್ ಖಾನ್‌ಗೆ ಹೇಳಿದ್ದೇನೆ. ಗುಂಡಿನ ದಾಳಿ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣದ ಮೂಲವನ್ನು ಹುಡುಕುತ್ತಿದ್ದು, ಯಾರನ್ನೂ ಬಿಡಲ್ಲ. ಯಾರೂ ಈ ರೀತಿ ಟಾರ್ಗೆಟ್ ಮಾಡಬಾರದು ಎಂದು ಹೇಳಿದರು.
ಯಾವುದೇ ಗ್ಯಾಂಗ್ ಅಥವಾ ಗ್ಯಾಂಗ್ ವಾರ್‌ಗೆ ಅವಕಾಶ ನೀಡುವುದಿಲ್ಲ. ಇನ್ಮುಂದೆ ಈ ರೀತಿಯ ಘಟನೆಗಳು ಸಂಭವಿಸಲು ನಾವು ಬಿಡುವುದಿಲ್ಲ. (ಲಾರೆನ್ಸ್) ಬಿಷ್ಣೋಯ್ ಗ್ಯಾಂಗ್‌ ನನ್ನು ಮುಗಿಸುತ್ತೇವೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ಘಟನೆ ನಡೆದ ದಿನವೇ ನಟನೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು. ಮುಂಬೈ ಪೊಲೀಸ್ ಕಮಿಷನರ್ ಜೊತೆಯೂ ಮಾತನಾಡಿದ್ದು, ನಟನ ಭದ್ರತೆ ಹೆಚ್ಚಿಸುವಂತೆ ಸೂಚಿಸಿದ್ದರು.
ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ನಟ ತನ್ನ ಕುಟುಂಬದೊಂದಿಗೆ ವಾಸಿಸುವ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿತ್ತು. ಕಿಡಿಗೇಡಿಗಳ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಶಂಕಿತರಲ್ಲಿ ಒಬ್ಬರು ಕಪ್ಪು ಜಾಕೆಟ್ ಮತ್ತು ಡೆನಿಮ್ ಪ್ಯಾಂಟ್‌ಗಳೊಂದಿಗೆ ಬಿಳಿ ಟಿ-ಶರ್ಟ್ ಅನ್ನು ಧರಿಸಿದ್ದರೆ, ಇನ್ನೊಬ್ಬರು ಡೆನಿಮ್ ಪ್ಯಾಂಟ್‌ನೊಂದಿಗೆ ಕೆಂಪು ಟೀ ಶರ್ಟ್‌ನಲ್ಲಿ ಧರಿಸಿದ್ದರು. ಇವರಿಬ್ಬರು ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ನೇತೃತ್ವದ ಗ್ಯಾಂಗ್‌ನ ಸದಸ್ಯರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.