ಡೈಲಿ ವಾರ್ತೆ: 18/April/2024
ಬಂಟ್ವಾಳದಲ್ಲಿ ಎ.20 ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಂದ ಚುನಾವಣಾ ಪ್ರಚಾರ
ಬಂಟ್ವಾಳ : ಲೋಕಸಭಾ ಚುನಾವಣೆಯ ಪ್ರಚಾರ ಬಿರುಸಿನಿಂದ ನಡೆಯುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎ.20 ರಂದು ಬಂಟ್ವಾಳದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್ ತಿಳಿಸಿದರು.
ಅವರು ಬಿ.ಸಿ.ರೋಡಿನ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬಿಜೆಪಿ ಅಭ್ಯರ್ಥಿ ಬಂಟ್ವಾಳ ಕ್ಷೇತ್ರದಲ್ಲಿ ಈಗಾಗಲೇ 5 ಬಾರಿ ಮತಯಾಚನೆಯಲ್ಲಿ ಭಾಗಿಯಾಗಿದ್ದಾರೆ. ಎ. 22 ರಂದು ಮತ್ತೆ ಬಂಟ್ವಾಳ ಕ್ಷೇತ್ರದಲ್ಲಿ ಸಂಚಾರ ಮಾಡಿ ವಿಭಿನ್ನ ರೀತಿಯಲ್ಲಿ ಮತಯಾಚನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಕಾರ್ಯಕರ್ತರು 249 ಬೂತ್ ಗಳಲ್ಲಿ ಪ್ರಥಮ ಸುತ್ತಿನ ಮನೆ ಸಂಪರ್ಕ ಮುಗಿಸಿದ್ದಾರೆ. ಎರಡನೇ ಹಂತದ ಪ್ರಚಾರದಲ್ಲಿ ಇದೀಗ ನಿರತರಾಗಿದ್ದಾರೆ. ಎ. 21 ರಂದು ಆದಿತ್ಯವಾರ ಕ್ಷೇತ್ರದಲ್ಲಿ ಮಹಾಭಿಯಾನ ಕಾರ್ಯದಲ್ಲಿ ಶಾಸಕರು ಹಾಗೂ ಹಿರಿಯ ಜನಪ್ರತಿನಿಧಿಗಳು ಜೊತೆಯಾಗಿ ತೊಡಗಿಸಕೊಳ್ಳಲಿದ್ದಾರೆ.
ಈ ಚುನಾವಣೆ ದೇಶದ ಚುನಾವಣೆ ಹಾಗಾಗಿ ಜಾತಿ ಹೆಸರಲ್ಲಿ ಚುನಾವಣೆ ನಡೆಯುವುದಿಲ್ಲ. ಕೆಲವರು ಜಾತಿ ಹೆಸರಿನಲ್ಲಿ ಗುಪ್ತವಾಗಿ ಮತಯಾಚನೆ ಮಾಡುತ್ತಾ ಇದ್ದಾರೆ ಎಂದು ಅವರು ದೇಶದ 140 ಕೋಟಿ ಜನರು ಈ ದೇಶದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವ ಅಪೇಕ್ಷೆಯನ್ನು ಹೊಂದಿದ್ದಾರೆ ಎಂದರು.
ಶಾಸಕ ರಾಜೇಶ್ ನಾಯ್ಕ್ ಅವರು ಹಿರಿಯ ನಾಯಕರನ್ನು ಜೊತೆಯಾಗಿಸಿಕೊಂಡು ಕ್ಷೇತ್ರದಲ್ಲಿ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. “ಗ್ರಾಮ, ಮನೆ, ಮನ ಸಂಪರ್ಕ ಅಭಿಯಾನ” ಎಂಬ ವಿಭಿನ್ನ ಶೈಲಿಯ ಕಾರ್ಯಕ್ರಮದ ಮೂಲಕ ಜನರ ಬಳಿಗೆ ತೆರಳಿ ಮತಯಾಚನೆ ನಡೆಸುತ್ತಿದ್ದು, ಇಡೀ ಜಿಲ್ಲೆಯಲ್ಲಿ ಮಾದರಿ ಕಾರ್ಯಕ್ರಮವಾಗಿದೆ ಎಂದರು.
ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಮಾತನಾಡಿ , ಜಾತಿ ಮತ್ತು ಸುಳ್ಳಿನ ವಿಷ ಬೀಜ ಬಿತ್ತುವ ಸೋ ಕಾಲ್ಡ್ ಲೀಡರ್ ಗಳ ಮಾತಿಗೆ ಬೆಲೆ ನೀಡದೆ ಭಾರತವನ್ನು ವಿಕಸಿತ ಭಾರತವನ್ನು ಆಗಿಸುವ ಕನಸು ಹೊಂದಿರುವ ಮೋದಿಯವರ ಕೈಯನ್ನು ಬಲಪಡಿಸಲು ಬಿಜೆಪಿಗೆ ಮತನೀಡಿ ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ, ಹಿಂದುಳಿದ ವರ್ಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ, ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವಾಮದಪದವು, ಉಪಾಧ್ಯಕ್ಷ ಚಿದಾನಂದ ರೈ ಕಕ್ಯ ಮತ್ತಿತರರು ಉಪಸ್ಥಿತರಿದ್ದರು.