ಡೈಲಿ ವಾರ್ತೆ: 18/April/2024

ಬ್ರಹ್ಮಾವರ: ಸ್ಕೂಟರ್ ಗೆ ಲಾರಿ ಡಿಕ್ಕಿ – ಸವಾರ ಸ್ಥಳದಲ್ಲೇ ಮೃತ್ಯು!

ಬ್ರಹ್ಮಾವರ: ಎಲೆಕ್ಟ್ರಿಕ್ ಸ್ಕೂಟರ್ ಗೆ ಲಾರಿ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬ್ರಹ್ಮಾವರ ಹೇರೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ ಸಂಜೆ ನಡೆದಿದೆ.

ಮೃತರನ್ನು ಹೇರೂರು ನಿವಾಸಿ ಕೃಷ್ಣ ಗಾಣಿಗ ಎಂದು ಗುರುತಿಸಲಾಗಿದೆ.

ಸಂತೆಕಟ್ಟೆಯಿಂದ ಬ್ರಹ್ಮಾವರಕ್ಕೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು. ರಸ್ತೆ ದುರಸ್ತೆ ಕಾಮಗಾರಿ ಯಿಂದಾಗಿ ಸಂಚಾರ ವ್ಯತ್ಯಯ ಉಂಟಾಗಿ ರಸ್ತೆಯನ್ನು ಏಕ ಪಥಕ್ಕೆ ಇಳಿಸಿದ್ದರಿಂದ  ದ್ವಿಚಕ್ರ ಸವಾರ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಕೃಷ್ಣ ಅವರು ಉಡುಪಿ ನಗರ ಪಾಲಿಕೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣಿಕರು ಪರದಾಡಿದರು. ತಕ್ಷಣ ಬ್ರಹ್ಮಾವರ ಠಾಣಾಧಿಕಾರಿ ಮಧು ಬಿ. ಇ. ಸ್ಥಳಕ್ಕಾಗಮಿಸಿ ಪರಿಶೀಲಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.