ಡೈಲಿ ವಾರ್ತೆ: 18/April/2024

ಕಾರ್ಪೊರೇಟರ್ ಮಗಳು ನೇಹಾ ಕೊಲೆ ಪ್ರಕರಣ: ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಆಕ್ರೋಶ, ಆರೋಪಿಯನ್ನು ಎನ್ಕೌಂಟರ್ ಮಾಡುವಂತೆ ಒತ್ತಾಯ!

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಪುತ್ರಿ ನೇಹಾ ಕೊಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರೀತಿಸಲು‌ ನಿರಾಕರಿಸಿದಳು ಎಂಬ ಕಾರಣಕ್ಕಾಗಿ ಪಾಗಲ್‌ ಪ್ರೇಮಿ ಫಯಾಜ್, ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾಳನ್ನು ಚಾಕುವಿನಿಂದ ಬರೋಬ್ಬರಿ 10 ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ. ಕೊಲೆಯಾದ ಒಂದೇ ಗಂಟೆಯಲ್ಲಿ ವಿದ್ಯಾನಗರ ಠಾಣೆ‌ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಈ ಪ್ರಕರಣವನ್ನು ಖಂಡಿಸಿ ಎಬಿವಿಪಿ ಸಂಘಟನೆ ಪ್ರತಿಭಟನೆ ನಡೆಸಿದೆ. ಅಲ್ಲದೇ ಈ ಪ್ರಕರಣ ಸಂಬಂಧ ಬಿಜೆಪಿ, ಟ್ವೀಟ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದೀಗ ಈ ಪ್ರಕರಣ ರಾಜಕೀಯ ಮಾತ್ರವಲ್ಲದೇ ಹಿಂದೂ-ಮುಸ್ಲಿಂ ತಿರುವು ಪಡೆದುಕೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಇದಕ್ಕೆ ಪೂರಕವೆಂಬತೆ ಎಬಿವಿಪಿ, ಹಿಂದೂ ಸಂಘಟನೆ ಪ್ರತಿಭಟನೆಗಿಳಿದಿದ್ದು, ಆರೋಪಿಯನ್ನು ಗಲ್ಲಿಗೇರಿಸುವಂತೆ ಆಗ್ರಹಿಸುತ್ತಿವೆ.
ಹಿಂದೂ, ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನೆ
ನೇಹಾ ಕೊಲೆ ಖಂಡಿಸಿ ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಮುಂಭಾಗ ಎಬಿವಿಪಿ ಕಾರ್ಯಕರ್ತರು ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಈ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಅಲ್ಲದೇ ನೇಹಾ ಕೊಂದ ಆರೋಪಿ ಫಯಾಜ್ನನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿದರು. ಇನ್ನೊಂದೆಡೆ ಎನ್‌ಎಸ್‌ಯುಐ ಕಾರ್ಯಕರ್ತರು ಸಹ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಮುಂಭಾಗ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದು, ಆರೋಪಿ ಫಯಾಜ್ನನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿದೆ.
ಇನ್ನು ಪ್ರಕರಣ ಖಂಡಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ವಿದ್ಯಾನಗರ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದು, ಆರೋಪಿ ಮನೆಗೆ ಬೆಂಕಿ ಹಚ್ಚಬೇಕೆಂದು ಆಕ್ರೋಶ ಹೊರಹಾಕಿದರು. ಅಲ್ಲದೇ ಆರೋಪಿ ಪರ ಯಾವ ವಕೀಲರು ಜಾಮೀನು ಹಾಕಬಾರದು ಅಲ್ಲದೇ ಆರೋಪಿಯನ್ನು ಎನ್ ಕೌಂಟರ್ ಮಾಡಬೇಕೆಂದು ಆಗ್ರಹಿಸಿದರು.