ಡೈಲಿ ವಾರ್ತೆ: 19/April/2024

ಬಡವರ ಪರ ಕೆಲಸ ಮಾಡಿದ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದ ಅಗತ್ಯವಿದೆ: ಮಾಜಿ ಸಚಿವ ಬಿ.ರಮಾನಾಥ ರೈ

ಬಂಟ್ವಾಳ : ಬಡವರ ಪರ ಕೆಲಸ ಮಾಡಿದ ಪಕ್ಷವಾಗಿರುವ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದ ಅಗತ್ಯವಿದೆ ಎಂದು ಮಾಜಿ ಸಚಿವ, ಲೋಕಸಭಾ ಚುನಾವಣಾ ಜಿಲ್ಲಾ ಉಸ್ತುವಾರಿ ಬಿ.ರಮಾನಾಥ ರೈ ಹೇಳಿದರು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಿ.ಸಿ.ರೋಡ್, ಕೈಕಂಬ ದಲ್ಲಿ ಮಂಗಳೂರಿನಲ್ಲಿ ನಡೆದ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ಅವರ ರೋಡ್ ಶೋ ಬಳಿಕ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ನಡೆದ ಚುನಾವಣಾ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು.

   

ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಅವಿಭಜಿತ ಜಿಲ್ಲೆಯ ಸಂಸದರು ಮಾಡಿದ ಅಭಿವೃದ್ಧಿ ಕಾರ್ಯಗಳು, ಇಂದಿರಾಗಾಂಧಿ ಅವರ 20 ಅಂಶದ ಕಾರ್ಯಕ್ರಮ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಟಾನಗೊಂಡಿದೆ ಎಂದು ತಿಳಿಸಿದ ಅವರು ಜಿಲ್ಲೆಯಲ್ಲಿ ಇನ್ನಷ್ಟೂ ಅಭಿವೃದ್ಧಿ ಕಾರ್ಯಗಳು ಆಗಬೇಕಾದರೆ, ಸಾಮಾಜಿಕ, ಸಾಂಸ್ಕೃತಿಕ, ಸಾಮರಸ್ಯ ಶಾಶ್ವತವಾಗಿ ನೆಲೆ ನಿಲ್ಲಬೇಕಾದರೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರ ಗೆಲುವು ಅನಿವಾರ್ಯ ಎಂದರು.

  ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ ಶಾಂತಿ, ಸೌಹಾರ್ದತೆಗೆ ಪೂರಕವಾದ ವಾತಾವರಣ ನಿರ್ಮಿಸೋಣ, ಜಿಲ್ಲೆಯಲ್ಲಿ ಕಳೆದ  ಹಿಂದೆ ಕಾಂಗ್ರೆಸ್ ಪಕ್ಷದ ಸಂಸದರು ಮಾಡಿದ ಅಭಿವೃದ್ಧಿ ಹೊರತು ಕಳೆದ 33 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿಯ ಸಂಸದರು ಜಾತಿ, ಧರ್ಮದ ವಿಷ ಬೀಜ ಬಿತ್ತಿ ಅದೆಷ್ಟೋ ಮಂದಿ ಜೈಲು, ಕೋರ್ಟ್, ಆಸ್ಪತ್ರೆ, ಸ್ಮಶಾನ ಸೇರುವಂತೆ ಮಾಡಿರುವುದು ಬಿಟ್ಟರೆ ಬೇರೇನೂ ಸಾಧನೆ ಮಾಡಿಲ್ಲ ಎಂದು ಆರೋಪಿಸಿದರು.

  ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರಕಾರ ಗ್ಯಾರೆಂಟಿ ಸಹಿತ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದನ್ನು ಮನೆಮನೆಗೆ ತಲುಪಿಸಿ. ಇದರೊಂದಿಗೆ ಉದ್ಯೋಗ ಸೃಷ್ಟಿಯ ಕೆಲಸವೂ ಜಿಲ್ಲೆಯಲ್ಲಿ ನಡೆಸಲಾಗುವುದು. ಮಾತ್ರವಲ್ಲ, ನಿಮ್ಮ ಸಮಸ್ಯೆಗಳ ಧ್ವನಿಯಾಗಿ ಸಂಸತ್ತಿನಲ್ಲಿ ಕೆಲಸ ಮಾಡುತ್ತೇನೆ. ಸಂಸತ್ ಸದಸ್ಯನಾಗಿ ನಿಮ್ಮ ಕಾವಲುಗಾರನಾಗಿ ಕೆಲಸ ನಿರ್ವಹಿಸುತ್ತೇನೆ ಎಂದರು.

    ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಬಡವರ ಪರವಾಗಿ ಇರುವ ಸರಕಾರ ಇಂದಿನ ಅಗತ್ಯ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬಂತೆ ಕಾಂಗ್ರೆಸ್ ಸರಕಾರ ಕೆಲಸ ಮಾಡುತ್ತಾ ಬಂದಿದೆ. ಮುಂದೆಯೂ ಬಡವರ ಬಗ್ಗೆ ಕಾಳಜಿ ವಹಿಸಲು, ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ದುಡಿಯಲು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

     ಪಕ್ಷ ಪ್ರಮುಖರಾದ ಎಂ.ಎಸ್. ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಅಶ್ವನಿ ಕುಮಾರ್ ರೈ, ಪದ್ಮಶೇಖರ್ ಜೈನ್, ಬಿ.ಎಂ.ಅಬ್ಬಾಸ್ ಅಲಿ, ಸುದರ್ಶನ್ ಜೈನ್, ಜಯಂತಿ ವಿ.ಪೂಜಾರಿ, ಜೋಸ್ಮಿನ್ ಡಿ.ಸೋಜ, ಅನ್ವರ್ ಕರೋಪಾಡಿ, ಸಂಜೀವ ಪೂಜಾರಿ, ಕೆ ಪದ್ಮನಾಭ ರೈ, ಜಗದೀಶ ಕೊಯಿಲ , ಮೋಹನ್ ಗೌಡ ಕಲ್ಮಂಜ, ನಾರಾಯಣ ನಾಯ್ಕ, ಸುರೇಶ್ ಕುಮಾರ್ ನಾವೂರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

     ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಯುವ ಕಾಂಗ್ರೆಸ್ ಅಧ್ಯಕ್ಷ
ಇಬ್ರಾಹಿಂ ನವಾಝ್ ಬಡಕಬೈಲು ವಂದಿಸಿದರು.