ಡೈಲಿ ವಾರ್ತೆ: 20/April/2024

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಆಲ್ದೂರಿನಲ್ಲಿ ಕಾಂಗ್ರೆಸ್ ಬೃಹತ್ ಜಾಥ: ಅಭಿಮಾನ ಮತವಾಗಿ ಬದಲಾಗಲಿ: ಜಯಪ್ರಕಾಶ್‌ ಹೆಗ್ಡೆ

ಚಿಕ್ಕಮಗಳೂರು: ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತಯಾಚನೆಯ ವೇಳೆ ಜನರು ಅಪಾರ ಅಭಿಮಾನ, ಪ್ರೀತಿ, ಪ್ರೋತ್ಸಾಹ ನೀಡಿದ್ದಾರೆ.
ಈ ಅಭಿಮಾನ ಮತ್ತು ಪ್ರೀತಿ ಮತವಾಗಿ ಬದಲಾಗುತ್ತದೆ ಎಂಬ ನಂಬಿಕೆ ಇದೆ. ಜನ ಬದಲಾವಣೆ ಬಯಸಿದ್ದಾರೆ. ಇದಕ್ಕೆ ರಾಜ್ಯದಲ್ಲಿ ಕಾಂಗ್ರೆಸ್‌ ಮಾಡಿದ ಅಭಿವೃದ್ಧಿ ಕಾರ್ಯಗಳು ಮತ್ತು ಬಡವರ ಬದುಕಿಗೆ ನೆರವಾದ ಐದು ಗ್ಯಾರೆಂಟಿಗಳೇ ಕಾರಣ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆ ಹೇಳಿದರು.

ಅವರು ತಾಲೂಕಿನ ಆಲ್ದೂರಿನಲ್ಲಿ ನಡೆದ ಬೃಹತ್‌ ಜಾಥದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. “ಕಳೆದ ನಾಲ್ಕು ದಶಕಗಳಿಂದ ರಾಜಕೀಯದಲ್ಲಿ ತೊಡಗಿಕೊಂಡಿದ್ದ ನನ್ನ ಬಗ್ಗೆ ಜನರು ಅಪಾರ ಪ್ರೀತಿ ತೋರಿಸುತ್ತಿರುವುದು ಮಾಡಿರುವ ಕೆಲಸಗಳನ್ನು ನೋಡಿ. ಕೇವಲ 20 ತಿಂಗಳ ಕಾಲ ಸಂಸದನಾಗಿದ್ದರೂ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಒಂದು ರೈಲ್ವೆ ಆರಂಭವಾಗಿ ಹತ್ತು ವರ್ಷ ಕಳೆದರೂ ಆನಂತರ ಅಧಿಕಾರಕ್ಕೆ ಬಂದವರಿಗೆ ಮತ್ತೊಂದು ರೈಲು ತರಲಾಗಲಿಲ್ಲ. ಪಕ್ಷದ ಜನರೇ “ಗೋ ಬ್ಯಾಕ್‌” ಎಂದು ಹೇಳುವ ಸ್ಥಿತಿ ನಿರ್ಮಾಣವಾಯಿತು. ಇದರಿಂದಾಗಿ ಪ್ರತಿಸ್ಪರ್ಧಿ ಕ್ಷೇತ್ರವನ್ನೇ ತೊರೆದು ಹೋಗುವಂತಾಯಿತು. ಏನಾದರೂ ಅಭಿವೃದ್ಧಿ ಮಾಡಿದರೆ ಕ್ಷೇತ್ರದ ಜನರು ಚುನಾವಣೆ ಬಂದಾಗ ಸ್ಮರಿಸುತ್ತಾರೆ.

ಚಿಕ್ಕಮಗಳೂರಿನ ಬೀದಿ ಬೀದಿಗಳಲ್ಲಿ ಮತಯಾಚನೆ ಮಾಡುವಾಗ ಜನ ತೋರುತ್ತಿರುವ ಪ್ರೀತಿಯನ್ನು ಕಂಡಾಗ ಗೆಲ್ಲುವ ಆತ್ಮವಿಶ್ವಾಸ ಮೂಡಿದೆ,” ಎಂದರು.
“ಜನಪ್ರತಿನಿಧಿಯಾಗಿ ಅಡಿಕೆ ಬೆಳೆಗಾರರಿಗೆ ಮಾಡಿದ ನೆರವು, ಕಾಂಗ್ರೆಸ್‌ ಸರಕಾರದ ಕೃಷಿಕರಿಗೆ ಪೂರಕವಾದ ಯೋಜನೆಗಳು ಮತ ಕೇಳಲು ಮತ್ತು ಮತದಾರರೊಂದಿಗೆ ಚರ್ಚಿಸಲು ಸಹಾಯ ಮಾಡಿದೆ. ಜನಪ್ರತಿನಿಧಿ ಎನಿಸಿಕೊಂಡವರು, ಚುನಾವಣೆ ವೇಳೆ ಮತ ಯಾಚಿಸುವಾಗ ಅವರು ಕ್ಷೇತ್ರದ ಜನರಿಗಾಗಿ ಮಾಡಿದ ಯಾವುದಾದರೂ ಕೆಲಸಗಳಿದ್ದರೆ ನೆರವಾಗುತ್ತದೆ. ಉಡುಪಿ- ಚಿಕ್ಕಮಗಳೂರಿನ ಮತದಾರರು ಹಿಂದೆ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನೋಡಿಕೊಂಡು ಜಯಕ್ಕಾಗಿ ಹಾರೈಸುತ್ತಿದ್ದಾರೆ. ಇದು ಯಶಸ್ಸಿನ ಹಾದಿಗೆ ನೆರವಾಗುತ್ತದೆ ಎಂದರು.

ಮೂಡಿಗೆರೆ ಶಾಸಕಿ, ನಯನಾ ಮೋಟಮ್ಮ ಮಾತನಾಡಿ, “ಇವತ್ತು ರಾಜ್ಯ ಮಹಿಳೆಯರು ಖುಷಿಯಿಂದ, ಆತ್ಮವಿಶ್ವಾಸದಿಂದ ಇರಲು ಕಾಂಗ್ರೆಸ್‌ ಸರಕಾರ ನೀಡಿದ ಐದು ಗ್ಯಾರೆಂಟಿಗಳೇ ಕಾರಣವಾಗಿವೆ. ಮಾಜಿ ಮುಖ್ಯಮಂತ್ರಿಗಳು ಈ ಗ್ಯಾರೆಂಟಿಯಿಂದ ಮಹಿಳೆಯರು ಹಾದಿ ತಪ್ಪುತ್ತಿದ್ದಾರೆ ಎಂದು ಲೇವಡಿ ಮಾಡಿರುವುದು ಖಂಡನೀಯ. ಏಪ್ರಿಲ್‌ 26ರಂದು ನಡೆಯುವ ಮತದಾನದ ವೇಳೆ ಕ್ಷೇತ್ರದ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಕಾಂಗ್ರೆಸ್‌ ಸರಕಾರ ನೀಡಿರುವ ಐದು ಗ್ಯಾರೆಂಟಿಗಳಿಂದ ಅಭಿವೃದ್ಧಿ ಕಾರ್ಯ ಮರೆತ ವಿರೋಧ ಪಕ್ಷಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಸೋಲಿನ ಆತಂಕ ಕಾಡಿದಾಗ ಲೇವಡಿಯೇ ಅಸ್ತ್ರವಾಗುತ್ತದೆ. ನಮ್ಮ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಅವರು ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದಾರೆಯೇ ಹೊರತು ಪ್ರತಿಸ್ಪರ್ಧಿಗಳನ್ನು ಟೀಕಿಸಿಯೋ ಅಥವಾ ಲೇವಡಿ ಮಾಡಿಯೋ ಮತ ಯಾಚಿಸುತ್ತಿಲ್ಲ. ಮಹಿಳೆಯರನ್ನು ಅವಮಾನಿಸುವುದು ಕಾಂಗ್ರೆಸ್‌ ಸಂಸ್ಕೃತಿಯಲ್ಲ. ನಾಳೆಯ ನೆಮ್ಮದಿಗಾಗಿ ಇಂದು ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಮಾಜಿ ಶಾಸಕಿ ಮೋಟಮ್ಮ, ಎಂ.ಪಿ. ಕುಮಾರ ಸ್ವಾಮಿ ಹಾಗೂ ಕಾಂಗ್ರೆಸ್‌ನ ಇತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.