

ಡೈಲಿ ವಾರ್ತೆ: ಫೆ./13/2026
ಬ್ರಹ್ಮಾವರದಲ್ಲಿ ‘ಅಭಿಮತ ಸಂಭ್ರಮ’ : ದಯಾ ನಾಯಕ್‌ಗೆ ಕೀರ್ತಿ ಕಲಶ ಮಹಾಗೌರವ, ವಿಜಯ ಪ್ರಕಾಶ್ ಸಂಗೀತ ರಂಜನೆ

ಕೋಟ, ಫೆ.13: ಜನಸೇವಾ ಟ್ರಸ್ಟ್ ಗಿಳಿಯಾರು ಆಶ್ರಯದಲ್ಲಿ ‘ಅಭಿಮತ ಸಂಭ್ರಮ’ ಎಂಬ ವಿಶೇಷ ಕಾರ್ಯಕ್ರಮವು ಫೆಬ್ರವರಿ 14ರಂದು ಸಂಜೆ 6 ಗಂಟೆಗೆ ಗಾಂಧೀ ಮೈದಾನ, ಬ್ರಹ್ಮಾವರದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸಂಯೋಜಕರಾದ ಕೊತ್ತಾಡಿ ಶರತ್ ಶೆಟ್ಟಿ ಹೇಳಿದರು.ಅವರು ಗುರುವಾರ ಬ್ರಹ್ಮಾವರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ

ಕಾರ್ಯಕ್ರಮದ ಆರಂಭದಲ್ಲಿ ನೃತ್ಯವಸಂತ ನಾಟ್ಯಾಲಯ ಕುಂದಾಪುರ ಆಶ್ರಯದಲ್ಲಿ “ನೃತ್ಯೋಪಾಸನೆ” ನಡೆಯಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಂಬೈ ಪೊಲೀಸ್ ಇಲಾಖೆಯ ನಿವೃತ್ತ ಎ.ಸಿ.ಪಿ. ದಯಾ ನಾಯಕ್ ಅವರಿಗೆ “ಅಭಿಮತ ಕೀರ್ತಿ ಕಲಶ ಮಹಾಗೌರವ” ನೀಡಿ ಸನ್ಮಾನಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಸೂಲಗಿತ್ತಿ ಲಕ್ಷ್ಮೀ ಪೂಜಾರಿ ಹಾಗೂ ಯಶಸ್ವಿ ಕಲಾವೃಂದ ತೆಕ್ಕಟ್ಟೆ ಸಂಸ್ಥೆಗಳಿಗೆ “ಯಶೋಗಾಥೆ ಗೌರವ” ನೀಡಿ ಗೌರವಿಸಲಾಗುವುದು.

ಕಾರ್ಯಕ್ರಮದಲ್ಲಿ ಚಿತ್ರನಟ ರಿಷಬ್ ಶೆಟ್ಟಿ, ಆಳ್ವಾಸ್ ಪ್ರತಿಷ್ಠಾನದ ಡಾ. ಮೋಹನ್ ಅಳ್ವಾ, ಡಾ. ಕೆ. ಪ್ರಕಾಶ್ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಖ್ಯಾತ ಹಿನ್ನಲೆ ಗಾಯಕ ವಿಜಯ ಪ್ರಕಾಶ್ ಮತ್ತು ತಂಡದಿಂದ “ಸಿಂಗಾರ ಸಿರಿ” ಸಂಗೀತ ರಂಜನೆ ನಡೆಯಲಿದೆ. ಜನಪ್ರಿಯ ನಿರೂಪಕಿ ಅನುಶ್ರೀ ಕಾರ್ಯಕ್ರಮ ನಿರೂಪಿಸಲಿದ್ದಾರೆ.
ಸಾಂಸ್ಕೃತಿಕ, ಸಾಮಾಜಿಕ ಮತ್ತು ಕಲಾ ಕ್ಷೇತ್ರದ ಗಣ್ಯರನ್ನು ಒಂದೇ ವೇದಿಕೆಯಲ್ಲಿ ಕಾಣುವ ಈ ‘ಅಭಿಮತ ಸಂಭ್ರಮ’ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಅರುಣ್ ಶೆಟ್ಟಿ ಗಿಳಿಯಾರ್, ಖಜಾಂಚಿ, ಅಶೋಕ್ ಶೆಟ್ಟಿ ಬನ್ನಾಡಿ ಕಾರ್ಯದರ್ಶಿ, ಸ್ವಾಗತ ಸಮಿತಿ ಪ್ರಮುಖರಾದ ಸುಜೀರ್ ಶೆಟ್ಟಿ, ನಿಖಿಲ್ ನಾಯಕ್ ಉಪಸ್ಥಿತರಿದ್ದರು