ಡೈಲಿ ವಾರ್ತೆ: ಫೆ./13/2026

ಕೋಟ: ಮೊಳಹಳ್ಳಿ ಅಕ್ರಮ ಮರಳು ಅಡ್ಡೆಗೆ ಪೊಲೀಸರ ದಾಳಿ: ಮಾಲಕನ ಸಹಿತ 22 ಮಂದಿ ವಿರುದ್ಧ ಪ್ರಕರಣ ದಾಖಲು

ಕೋಟ, ಫೆ.13: ವರಾಹಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಸಂಘಟಿತ ದಂಧೆಯನ್ನು ಕೋಟ ಪೊಲೀಸರು ಭೇದಿಸಿ, ಸುಮಾರು 315 ಯುನಿಟ್ ಮರಳು ಹಾಗೂ ಮರಳು ತೆಗೆಯಲು ಬಳಸಿದ ಮೂರು ಫೈಬರ್ ಬೋಟ್‌ಗಳನ್ನು ಜಪ್ತಿ ಮಾಡಿದ್ದಾರೆ.

ದಿನಾಂಕ 12/02/2026 ರಂದು ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ, ಮೊಳಹಳ್ಳಿ ಗ್ರಾಮದ ಮರತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ಖಾಲಿ ಜಾಗಕ್ಕೆ ದಾಳಿ ನಡೆಸಲಾಯಿತು. ಈ ವೇಳೆ ಸುಮಾರು 15 ರಿಂದ 20 ಮಂದಿ ಕೆಲಸದವರು ವರಾಹಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ರಾಶಿ ಹಾಕುತ್ತಿರುವುದು ಪತ್ತೆಯಾಯಿತು. ಅಲ್ಲದೆ, ಪಕ್ಕದ ಹೊಳೆಯಲ್ಲಿ ಮೂರು ಬೋಟ್‌ಗಳನ್ನು ನಿಲ್ಲಿಸಿರುವುದೂ ಕಂಡುಬಂದಿತು.

ಸ್ಥಳದಲ್ಲಿದ್ದ ಕೆಲಸದವರನ್ನು ವಿಚಾರಿಸಿದಾಗ, ಹಳ್ನಾಡಿನ ದೇವಾನಂದ ಶೆಟ್ಟಿ ಅವರ ಸೂಚನೆಯ ಮೇರೆಗೆ ಮರಳು ತೆಗೆಯುತ್ತಿರುವುದಾಗಿ ತಿಳಿಸಿದರು. ತಕ್ಷಣ ಸ್ಥಳಕ್ಕೆ ಗಣಿ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಪರಿಶೀಲಿಸಿದಾಗ, ಮರಳು ತೆಗೆಯಲು ಯಾವುದೇ ಪರವಾನಿಗೆ ನೀಡಲಾಗಿಲ್ಲವೆಂದು ದೃಢಪಟ್ಟಿತು.

ದೇವಾನಂದ ಶೆಟ್ಟಿ (ಹಳ್ನಾಡು) ಸೇರಿದಂತೆ ಆತನ 21 ಮಂದಿ ಕೆಲಸಗಾರರು (ಎಲ್ಲರೂ ಉತ್ತರ ಪ್ರದೇಶ ಮೂಲದವರು) ಸೇರಿಕೊಂಡು ಯಾವುದೇ ಪರವಾನಿಗೆ ಅಥವಾ ದಾಖಲೆ ಇಲ್ಲದೇ ಸಂಘಟಿತವಾಗಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದರು ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮರಳನ್ನು ಸ್ವಂತ ಲಾಭಕ್ಕಾಗಿ ಸಂಗ್ರಹಿಸಿ ಮಾರಾಟ ಮಾಡಲು ರಾಶಿ ಹಾಕಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಸ್ಥಳದಿಂದ ಸುಮಾರು 315 ಯುನಿಟ್ ಮರಳು, 3 ಫೈಬರ್ ಬೋಟ್‌ಗಳು, ಮರಳು ತುಂಬಲು ಬಳಸಿದ 6 ಕಬ್ಬಿಣದ ಹಾರೆಗಳು ಹಾಗೂ 8 ಫೈಬರ್ ಬುಟ್ಟಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 24/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2), 112, 3(5) ಹಾಗೂ ಎಂಎಂಆರ್‌ಡಿ ಕಾಯ್ದೆ 4, 4(1A), 21ರಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ.