ಡೈಲಿ ವಾರ್ತೆ: 21/April/2024
ಅಂಗವಿಕಲ ಬಾಲಕನ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡದ ಮುಖಂಡರು
ಮೈಸೂರು: ರಾಜ್ಯದಲ್ಲಿ ಚುನಾವಣಾ ರಾಜಕೀಯ ಕಾವೇರುತ್ತಿರುವಾಗ ಬಹಿಷ್ಕಾರಕ್ಕೆ ಒಳಗಾದ ಬಡ ಕುಟುಂಬವೊಂದು ಸಾವನ್ನಪ್ಪಿದ ಅಂಗವಿಕಲ ಬಾಲಕನ ಅಂತ್ಯಸಂಸ್ಕಾರಕ್ಕೆ ಬಡ ಕುಟುಂಬವೊಂದು ಪರದಾಡಿದ ಅಮಾನವೀಯ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ತರಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಗನ ಮೃತದೇಹವನ್ನು ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ತಂದು ತಂದೆ ಪ್ರತಿಭಟಿಸಲು ಮುಂದಾಗಿದ್ದು, ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಮೃತದೇಹಕ್ಕೆ ಮುಕ್ತಿ ದೊರಕಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದಂತೆ ತಹಸೀಲ್ದಾರ್ ಶಿವಕುಮಾರ್ ಕಾಸ್ನೋರು ಹಾಗೂ ರೆವೆನ್ಯೂ ಪ್ರಕಾಶ್ ಗ್ರಾಮಕ್ಕೆ ಭೇಟಿ ನೀಡಿ ಮುಖಂಡರ ಮನ ಒಲಿಸಿದ್ದು, ಕೊನೆಗೂ ಯುವಕನ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಹುಲ್ಲಹಳ್ಳಿ ಸಮೀಪದ ತರಗನಹಳ್ಳಿಯ ನಿವಾಸಿ ಕುಳ್ಳನಾಯಕನ ಕುಟುಂಬದ ಮೇಲೆ ನಾಲ್ಕು ವರ್ಷಗಳ ಹಿಂದೆ ಗ್ರಾಮದ ಮುಖಂಡರು ಬಹಿಷ್ಕಾರ ಹೇರಿದ್ದರು. ನಿನ್ನೆ ಕುಳ್ಳನಾಯಕನ ಮಗ 15 ವರ್ಷದ ಮಾದೇಶ ಮೃತಪಟ್ಟಿದ್ದಾನೆ. ಅಂತ್ಯಸಂಸ್ಕಾರ ಮಾಡಲು ಗ್ರಾಮದಲ್ಲಿ ಅವಕಾಶ ನೀಡಿಲ್ಲ ಹಾಗೂ ಯಾರೂ ಸಹ ಮುಂದೆ ಬಂದಿಲ್ಲ.