ಡೈಲಿ ವಾರ್ತೆ: ಫೆ./13/2026

ಮಂಗಳೂರುನಲ್ಲಿ ಡ್ರಗ್ಸ್ ದಂಧೆ ಬಯಲು: 17.95 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ, ಮೂವರ ಬಂಧನ

ಮಂಗಳೂರು, ಫೆ.13: ಬೆಂಗಳೂರು ನಗರದಿಂದ ಎಂಡಿಎಂಎ ಮಾದಕ ವಸ್ತುಗಳನ್ನು ಖರೀದಿಸಿ ಮಂಗಳೂರು ನಗರ ಹಾಗೂ ಉಳ್ಳಾಲ ತಾಲೂಕಿನ ತಲಪಾಡಿ ಪರಿಸರದಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿ, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಖಚಿತ ಮಾಹಿತಿ ಆಧಾರಿಸಿ ಫೆ.12ರಂದು ಕಾರ್ಯಾಚರಣೆ ನಡೆಸಿದ ಸಿಸಿಬಿ ತಂಡ, ಎಂಡಿಎಂಎ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಕಾರನ್ನು ಪತ್ತೆಹಚ್ಚಿ ದಾಳಿ ನಡೆಸಿತು.

ಈ ವೇಳೆ ಉಳ್ಳಾಲ ಬಸ್ತಿ ಪಡ್ಪು ನಿವಾಸಿ ಮುಸ್ತಫಾ ಸೀದಿಯಬ್ಬ (34), ಉಳ್ಳಾಲ ಕೋಡಿ ನಿವಾಸಿ ಮೈಯದ್ದಿ (28) ಹಾಗೂ ಮುಕ್ಕಚೇರಿ ನಿವಾಸಿ ಮೊಹಮ್ಮದ್ ಶಿಫಾನ್ (28) ಅವರನ್ನು ಬಂಧಿಸಲಾಯಿತು.
ಆರೋಪಿಗಳ ವಶದಿಂದ ರೂ.11,90,000 ಮೌಲ್ಯದ 118.13 ಗ್ರಾಂ ತೂಕದ ನಿಷೇಧಿತ ಎಂಡಿಎಂಎ ಮಾದಕ ವಸ್ತು, ನಾಲ್ಕು ಮೊಬೈಲ್ ಫೋನ್‌ಗಳು ಹಾಗೂ KA-19-MQ-3420 ನೋಂದಣಿ ಸಂಖ್ಯೆಯ ಬೂದು ಬಣ್ಣದ ಸ್ವಿಫ್ಟ್ ಕಾರು ವಶಪಡಿಸಿಕೊಳ್ಳಲಾಗಿದೆ.

ಒಟ್ಟು ರೂ.17,95,000 ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಬಂಧಿತ ಆರೋಪಿ ಮುಸ್ತಫಾ ಸೀದಿಯಬ್ಬ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದನ ಕಳ್ಳತನ ಪ್ರಕರಣ ದಾಖಲಾಗಿರುವುದಲ್ಲದೆ, ಮೈಯದ್ದಿ ವಿರುದ್ಧ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಪ್ರಕರಣವೂ ದಾಖಲಾಗಿರುವುದು ತಿಳಿದುಬಂದಿದೆ.
ಮಾದಕ ವಸ್ತು ಮಾರಾಟ ಮತ್ತು ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಸಾಧ್ಯತೆ ಇದ್ದು, ಇತರ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.