

ಡೈಲಿ ವಾರ್ತೆ: ಫೆ./13/2026
ಸಾಸ್ತಾನ ಕಳಿಬೈಲು ಕೊರಗಜ್ಜನ ಮಹಿಮೆ: ಕಳೆದುಹೋದ ಚಿನ್ನದ ಬಳೆ 30 ದಿನದೊಳಗೆ ಮಡಿಲಿಗೆ – ನಂಬಿಕೆಯ ಗೆಲುವಿಗೆ ಸಾಕ್ಷಿಯಾದ ಪವಾಡ

ಕೋಟ: ಭಕ್ತರ ನಂಬಿಕೆಗೆ ಪ್ರತಿಫಲ ನೀಡುವ ದೈವಶಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಾಸ್ತಾನ ಕಳಿಬೈಲು ಕೊರಗಜ್ಜನ ಸನ್ನಿಧಾನ ಮತ್ತೊಮ್ಮೆ ತನ್ನ ಮಹಿಮೆಯನ್ನು ಪ್ರತ್ಯಕ್ಷಗೊಳಿಸಿದೆ.

ಕಳೆದುಹೋದ ಅಮೂಲ್ಯ ಚಿನ್ನದ ಬಳೆ, ದೈವ ನುಡಿಯಂತೆ ನಿರ್ದಿಷ್ಟ ಅವಧಿಯೊಳಗೆ ಮಾಲೀಕೆಯ ಕೈ ಸೇರಿರುವ ಘಟನೆ ಭಕ್ತರ ಮನಗಳಲ್ಲಿ ಅಪಾರ ಭಕ್ತಿ–ಭಾವವನ್ನು ಮೂಡಿಸಿದೆ.

ಬ್ರಹ್ಮಾವರ ನಿವಾಸಿ ಹಾಗೂ ಕೋಟದ ಸರ್ಕಾರಿ ಶಾಲೆಯ ಶಿಕ್ಷಕಿ ಸುಮಾ ಅವರು ಜನವರಿ 13ರಂದು ಎಂದಿನಂತೆ ತಮ್ಮ ಸ್ಕೂಟರ್‌ನಲ್ಲಿ ಬ್ರಹ್ಮಾವರದಿಂದ ಕೋಟಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಮಾಬುಕಳ ಸೇತುವೆ ಸಮೀಪ ಅವರ ಕೈಯಲ್ಲಿದ್ದ ಸುಮಾರು 12.5 ಗ್ರಾಂ ತೂಕದ (ಅಂದಾಜು ₹1,80,000 ಮೌಲ್ಯದ) ಚಿನ್ನದ ಬಳೆ ತಿಳಿಯದೆ ಕೈಯಿಂದ ಬಿದ್ದು ಹೋಗಿತ್ತು.
ಕೋಟ ತಲುಪಿದ ನಂತರ ಬಳೆ ಕಳೆದುಹೋದ ಸಂಗತಿ ತಿಳಿದು ಅವರು ಆತಂಕಗೊಂಡರು. ತಕ್ಷಣವೇ ಹಿಂದಿರುಗಿ ಬ್ರಹ್ಮಾವರದವರೆಗೆ ಹುಡುಕಾಟ ನಡೆಸಿದರೂ ಬಳೆ ಪತ್ತೆಯಾಗಲಿಲ್ಲ. ಬಳಿಕ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದರು. ಕೋಟ ಹಾಗೂ ಬ್ರಹ್ಮಾವರ ಪೊಲೀಸರು ಹೆದ್ದಾರಿಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೂ ಯಾವುದೇ ಸುಳಿವು ದೊರೆಯಲಿಲ್ಲ. ಹೀಗಾಗಿ ಬಳೆ ಮರಳಿ ಸಿಗುವ ನಿರೀಕ್ಷೆ ಕ್ಷೀಣಿಸಿತು.

ಇದಾದ ನಂತರ, ಭಕ್ತರಿಂದ ಕೇಳಿಬಂದ ಕೊರಗಜ್ಜನ ಪವಾಡಗಳ ಕುರಿತ ಮಾಹಿತಿ ಸುಮಾ ಅವರಲ್ಲಿ ಆಶಾಕಿರಣ ಮೂಡಿಸಿತು. ಅವರು ಸಾಸ್ತಾನ ಕೆಳಬೆಟ್ಟು ಮೂಡಹಡು ನೆಲೆನಿಂತ ಕಳಿಬೈಲು ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ನೀಡಿ ದೈವದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಅಲ್ಲಿ ಕಳಿಬೈಲು ಸ್ವಾಮೀ ಕೊರಗಜ್ಜ ಸೇವಾ ಸಮಿತಿ ಪ್ರಧಾನ ಅರ್ಚಕರಾದ ಶ್ರೀ ಅಭಿಜಿತ್ ಪಾಂಡೇಶ್ವರ ಅವರು ಪ್ರಾಶ್ನೆ ನೋಡಿ ದೈವ ನುಡಿಯಂತೆ, “ಚಿನ್ನದ ಬಗ್ಗೆ ಚಿಂತಿಸಬೇಡಿ. ಅಜ್ಜನಲ್ಲಿ ನಂಬಿಕೆ ಇಡಿ. ನಿಮ್ಮ ಚಿನ್ನ ಒಬ್ಬ ವ್ಯಕ್ತಿಗೆ ಸಿಕ್ಕಿದ್ದು, 80 ದಿನದೊಳಗೆ ನಿಮ್ಮ ಕೈ ಸೇರುತ್ತದೆ,” ಎಂದು ಅಭಯವಚನ ನೀಡಿದರು. ಚಿನ್ನ ಮರಳಿದರೆ ಸೇವೆ ಸಲ್ಲಿಸುವಂತೆ ಬೇಡಿಕೊಳ್ಳಲು ಸೂಚಿಸಿ ಪ್ರಸಾದ ನೀಡಿದರು.
ದೈವ ನುಡಿಯಂತೆ ಅಂದು, ಬನ್ನಾಡಿ ನಿವಾಸಿ ಪ್ರವೀಣ್ ಅವರು ಉಡುಪಿಯಿಂದ ಕೋಟಕ್ಕೆ ಬೈಕ್‌ನಲ್ಲಿ ಬರುತ್ತಿದ್ದಾಗ ಅವರ ಮೊಬೈಲ್ ಫೋನ್ ಮಾಬುಕಳ ಸೇತುವೆ ಬಳಿ ಬಿದ್ದಿತ್ತು. ಅದನ್ನು ಎತ್ತಿಕೊಳ್ಳುವ ವೇಳೆ ರಸ್ತೆಬದಿಯ ಮಣ್ಣಿನಲ್ಲಿ ಬಿದ್ದಿದ್ದ ಚಿನ್ನದ ಬಳೆ ಗಮನಕ್ಕೆ ಬಂದು, ಅದನ್ನು ಮನೆಗೆ ಸುರಕ್ಷಿತವಾಗಿ ತೆಗೆದುಕೊಂಡು ಹೋಗಿದ್ದರು. ತುರ್ತು ಕೆಲಸದ ನಿಮಿತ್ತ ಅವರು ನಂತರ ಬೆಂಗಳೂರಿಗೆ ತೆರಳಿದ್ದರು.
ಇದರ ನಡುವೆ, ಬಳೆ ಕಳೆದುಹೋದ ಬಗ್ಗೆ ಪೊಲೀಸರ ಬೀಟ್ ವಾಟ್ಸಪ್ ಗುಂಪಿನಲ್ಲಿ ಸಂದೇಶ ಪ್ರಸಾರಗೊಂಡಿತ್ತು. ಈ ಮಾಹಿತಿಯನ್ನು ಗಮನಿಸಿದ ಪ್ರವೀಣ್ ಅವರು ಫೆಬ್ರವರಿ 10ರಂದು ಕೋಟ ಪೊಲೀಸ್ ಠಾಣೆಗೆ ಬಳೆಯನ್ನು ಒಪ್ಪಿಸಿ ಪ್ರಾಮಾಣಿಕತೆ ಮೆರೆದರು. ಪೊಲೀಸರು ಸುಮಾ ಅವರನ್ನು ಠಾಣೆಗೆ ಕರೆಸಿ ಚಿನ್ನದ ಬಳೆಯನ್ನು ಹಸ್ತಾಂತರಿಸಿದರು.
ದೈವ ನುಡಿಯಂತೆ ಘಟನೆ ನೆರವೇರಿದುದನ್ನು ಕಂಡು ಭಾವಪರಶರಾದ ಸುಮಾ ಅವರು ಫೆಬ್ರವರಿ 13ರಂದು ಕಳಿಬೈಲು ಕೊರಗಜ್ಜನ ಸನ್ನಿಧಾನಕ್ಕೆ ತೆರಳಿ ಚಿನ್ನದ ಬಳೆಯನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿ, ಕೃತಜ್ಞತೆಯೊಂದಿಗೆ ಮರಳಿ ಸ್ವೀಕರಿಸಿದರು.
ಭಕ್ತರ ನಂಬಿಕೆಗೆ ಪ್ರತಿಫಲ ನೀಡುವ ದೈವ ಮಹಿಮೆ, ಪ್ರಾಮಾಣಿಕತೆಯನ್ನು ಮೆರೆದ ಸಾಮಾನ್ಯ ನಾಗರಿಕನ ಸತ್ಪ್ರವೃತ್ತಿ ಹಾಗೂ ಪೊಲೀಸರ ಪರಿಶ್ರಮ – ಈ ಮೂರು ಸಂಗತಿಗಳು ಸೇರಿ ಈ ಘಟನೆಗೆ ವಿಶೇಷ ಮಹತ್ವ ನೀಡಿವೆ. ಸಾಸ್ತಾನ ಕಳಿಬೈಲು ಕೊರಗಜ್ಜನ ಮಹಿಮೆ ಮತ್ತೊಮ್ಮೆ ಭಕ್ತರಲ್ಲಿ ನಂಬಿಕೆಯ ದೀಪವನ್ನು ಪ್ರಜ್ವಲಿಸಿದೆ.