



ಡೈಲಿ ವಾರ್ತೆ: 22/April/2024


ವರದಿ: ವಿದ್ಯಾಧರ ಮೊರಬಾ
ಅಂಕೋಲಾ: ಜೋಳದ ರೊಟ್ಟಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಎರಡು ಅಂಗಡಿಗಳಿಗೆ ಹಾನಿ!
ಅಂಕೋಲಾ : ಜೋಳದ ರೊಟ್ಟಿ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಪಕ್ಕದ ಬಳೆ ಅಂಗಡಿಗೂ ವ್ಯಾಪಿಸಿ ಹಾನಿ ಉಂಟಾದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಪಟ್ಟಣದ ಮುಖ್ಯ ರಸ್ತೆಯ ಅರಣ್ಯ ಇಲಾಖೆ ಕಾರ್ಯಾಲಯದ ಎದುರಿನಲ್ಲಿರುವ ಪ್ರೀತಿ ಗಣೇಶ ಹಿಚ್ಕಡ ಎನ್ನುವವರಿಗೆ ಸೇರಿದ ಜೋಳದ ರೊಟ್ಟಿ ಇತರ ತಿಂಡಿ ತಯಾರಿಸುವ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಕೂಡಲೇ ಸಾರ್ವಜನಿಕರು ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಪಕ್ಕದಲ್ಲೇ ಇರುವ ಅನಿತಾ ಸತೀಶ ನಾಯ್ಕ ಇವರಿಗೆ ಸೇರಿದ ಬಳೆ ಅಂಗಡಿಗೂ ಬೆಂಕಿ ಆವರಿಸಿದೆ. ಅಕ್ಕ ಪಕ್ಕ ಇನ್ನೂ ನಾಲ್ಕೈದು ಅಂಗಡಿಗಳಿದ್ದವು. ವಿಷಯ ತಿಳಿದ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿ ಹೆಚ್ಚಿನ ಅಪಾಯವಾಗದಂತೆ ತಪ್ಪಿಸಿದರು. ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ ಇದ್ದು ಅದೃಷ್ಟವಶಾತ್ ಸ್ಪೋಟಗೊಂಡಿಲ್ಲ. ರೊಟ್ಟಿ ಅಂಗಡಿಯ ಹಾಗೂ ಬಳೆ ಅಂಗಡಿಯ ಎಲ್ಲ ಸಾಮಗ್ರಿಗಳು ಸುಟ್ಟು ಹೋಗಿದ್ದು ಅಪಾರ ಹಾನಿ ಸಂಭವಿಸಿದೆ. ಇತ್ತೀಚೆಗೆ ಪುರಸಭೆಯಿಂದ ಪರವಾನಿಗೆ ಪಡೆದು ಅಂಗಡಿ ಇಟ್ಟ ಕೆಲವು ಪ್ರಭಾವಿಗಳೇ ಅಂಗಡಿಗಳನ್ನು ಮತ್ತೆ ಯಾರಿಗೋ ಬಾಡಿಗೆ ಕೊಡುತ್ತಿರುವದು ಹೆಚ್ಚಾಗುತ್ತಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.