ಡೈಲಿ ವಾರ್ತೆ: 23/April/2024

ಫರಂಗಿಪೇಟೆ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ:
ಎಲ್ಲರನ್ನು ಜೊತೆಗೆ ಕೊಂಡೊಯ್ಯುವ ಪದ್ಮರಾಜ್ ಆರ್. ಪೂಜಾರಿ ಸಮುದ್ರವಿದ್ದಂತೆ- ನಿಕೇತ್ ರಾಜ್ ಮೌರ್ಯ

ಬಂಟ್ವಾಳ : ಪದ್ಮರಾಜ್ ಅವರ ಹಿಂದೆ ಎಲ್ಲಾ ವರ್ಗದ ಜನರೂ ಇದ್ದಾರೆ. ಹಾಗಾಗಿ ಎಲ್ಲಾ ನದಿಗಳು ಸೇರಿ ಸಮುದ್ರವಾದಂತೆ ಪದ್ಮರಾಜ್ ಆರ್. ಪೂಜಾರಿ. ಅವರು ಎಲ್ಲರನ್ನೂ ಒಟ್ಟಾಗಿ ಮುನ್ನಡೆಸಲು ಶಕ್ತರು ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರನ್ನು ಗೆದುರ್ಗೇಶ್ಲ್ಲಿಸಬೇಕು ಎಂದು ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಹೇಳಿದರು.

    ಮುಡಿಪು ಬ್ಲಾಕ್ ಕಾಂಗ್ರೆಸ್  ವತಿಯಿಂದ ಫರಂಗಿಪೇಟೆ ಜಂಕ್ಷನ್ ನಲ್ಲಿ  ಭಾನುವಾರ ನಡೆದ ದ.ಕ. ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

   

ಪದ್ಮರಾಜ್ ಆರ್ ಪೂಜಾರಿ ಗೆದ್ದರೆ ಕನಕದಾಸ, ಬಸವಣ್ಣ, ಸೂಫಿ ಸಂತರು, ಅಂಬೇಡ್ಕರ್ ಅವರ ಆಶಯ ಗೆದ್ದಂತೆ, ಸಮಾಜವನ್ನು ಜೋಡಿಸುವವರು ಅಧಿಕಾರಕ್ಕೆ ಬರಬೇಕೇ ವಿನಃ ಒಡೆಯುವವರು ಬರಬಾರದು, ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಆಗಬೇಕಾದರೆ, ಸಾಮಾಜಿಕ, ಸಾಂಸ್ಕೃತಿಕ, ಸಾಮರಸ್ಯ ಶಾಶ್ವತವಾಗಿ ನೆಲೆ ನಿಲ್ಲಬೇಕಾದರೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರ ಗೆಲುವು ಅನಿವಾರ್ಯ ಎಂದರು.

     ಈ ಹಿಂದೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಆದದ್ದನ್ನು ಮಾರಾಟ ಮಾಡಿರುವುದೇ ಬಿಜೆಪಿ ಸರ್ಕಾರದ  ಸಾಧನೆ, ಅವರು ನೀಡಿದ ಭರವಸೆಗಳು ಭರವಸೆಗಳಾಗಿಯೇ ಉಳಿದಿದೆ ಹೊರತು ಒಂದನ್ನೂ ಈಡೇರಿಸಿಲ್ಲ, ಜನತೆಗೆ ನೀಡಿದ್ದು ಬರೇ ಚೊಂಬು ಎಂದು ಲೇವಡಿ ಮಾಡಿದರು.

   

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ಸರಕಾರ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇಂದು ಐದು ಗ್ಯಾರೆಂಟಿಗಳಿಂದ ಜನರು ಸ್ವಾವಲಂಭಿಯಾಗಿದ್ದಾರೆ. ಮಹಿಳೆಯರು ಆಶಾದಾಯಕ ಜೀವನ ನಡೆಸುತ್ತಿದ್ದಾರೆ. ಜನರನ್ನು ಇನ್ನಷ್ಟು ಸಶಕ್ತರನ್ನಾಗಿಸುವ ಉದ್ದೇಶದಿಂದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಇನ್ನಷ್ಟು ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ನೀಡಲಿದ್ದೇವೆ, ಇದರೊಂದಿಗೆ ಉದ್ಯೋಗ ಸೃಷ್ಟಿಯ ಕೆಲಸವೂ ಜಿಲ್ಲೆಯಲ್ಲಿ ನಡೆಸಲಾಗುವುದು. ಮಾತ್ರವಲ್ಲ, ನಿಮ್ಮ ಸಮಸ್ಯೆಗಳ ಧ್ವನಿಯಾಗಿ ಸಂಸತ್ತಿನಲ್ಲಿ ಕೆಲಸ ಮಾಡುತ್ತೇನೆ. ಸಂಸತ್ ಸದಸ್ಯನಾಗಿ ನಿಮ್ಮ ಕಾವಲುಗಾರನಾಗಿ ಕೆಲಸ ನಿರ್ವಹಿಸುತ್ತೇನೆ ಎಂದರು.

     ದ.ಕ.ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಮಾತನಾಡಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳಿಂದಾಗಿ ಈ ರಾಜ್ಯದ ಯಾವುದೇ ಹೆಣ್ಮಕ್ಕಳು ಹಾದಿ ತಪ್ಪಿಲ್ಲ, ಯಾವುದೋ ಬಹುದೊಡ್ಡ ನಿರೀಕ್ಷೆ ಇಟ್ಟುಕೊಂಡು ಹೋದ ಅಪ್ಪ, ಮಕ್ಕಳು ಹಾದಿ ತಪ್ಪಿ, ಭ್ರಮ ನಿರಸನಗೊಂಡು ಹತಾಶೆಯಿಂದ ಏನೇನೋ ಮಾತನಾಡುತ್ತಿದ್ದಾರೆ ಅವರಿಗೂ ಚೊಂಬೇ ಗತಿ ಎಂದರು.

ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬಂತೆ ಕಾಂಗ್ರೆಸ್ ಸರಕಾರ ಕೆಲಸ ಮಾಡುತ್ತಾ ಬಂದಿದೆ. ಮುಂದೆಯೂ ಬಡವರ ಬಗ್ಗೆ ಕಾಳಜಿ ವಹಿಸಲು, ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ದುಡಿಯಲು, ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಅಮರ್ ಆಳ್ವ, ದ.ಕ. ಜಿಲ್ಲಾಪಂಚಾಯತ್ ಮಾಜಿ ಸದಸ್ಯ ಕೆ.ಕೆ.ಸಾಹುಲ್ ಹಮೀದ್
ಸಭೆಯನ್ನುದ್ದೇಶಿಸಿ ಮಾತನಾಡಿದರು

    ಪಕ್ಷ ಪ್ರಮುಖರಾದ ಯು.ಟಿ. ಇಫ್ತಿಕಾರ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಮತಾ ಗಟ್ಟಿ, ಚಂದ್ರಹಾಸ ಕರ್ಕೇರಾ, ವೃಂದಾ ಪೂಜಾರಿ, ಲವೀನಾ, ಎಫ್.ಎ.ಖಾದರ್, ರಶೀದಾ ಬಾನು, ಇಕ್ಬಾಲ್ ಸುಜೀರ್, ಎಫ್.ಎಂ.ಬಶೀರ್, ಜಬ್ಬಾರ್ ಮಾರಿಪಳ್ಳ, ಬುಖಾರಿ ಕುಂಪನಮಜಲು, ಹಸನಬ್ಬ ಗುಡ್ಡೆ ಮನೆ, ಮೋನಾಕ, ಸಾಹುಲ್ ಹಮೀದ್, ರಝಾಕ್, ಇಸ್ಮಾಯಿಲ್, ಭಾಸ್ಕರ್ ರೈ, ಇಸಾಕ್,  ಮೋನು, ಸಲಾಂ ಮಲ್ಲಿ, ಸಮೀರ್ ಪಜೀರ್, ಇಮ್ತಿಯಾಝ್ ತುಂಬೆ, ಎಐಸಿಸಿ ವೀಕ್ಷಕ ಜೋನ್ ಮೊದಲಾದವರು
ವೇದಿಕೆಯಲ್ಲಿ ಉಪಸ್ಥಿತರಿದ್ದರು.

     ತಾಲೂಕು ಪಂಚಾಯತ್ ಮಾಜಿ ಸದಸ್ಯ ಆಸಿಫ್ ಇಕ್ಬಾಲ್ ಕುಂಪನಮಜಲು ಸ್ವಾಗತಿಸಿ, ಪುದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಮ್ಲಾನ್ ಮಾರಪಳ್ಳ ಪ್ರಸ್ತಾವನೆ  ಗೈದರು. ಇಕ್ಬಾಲ್ ಸುಜೀರ್ ವಂದಿಸಿ, ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

*ಇದೇ ವೇಳೆ ದುರ್ಗೇಶ್ ಶೆಟ್ಟಿ ಅವರು ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಬಳಿಕ ಮಾತನಾಡಿದ ಮಾತನಾಡಿದ ಅವರು ಈ ಹಿಂದೆ ನಾನು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು ಪಕ್ಷ ಬಿಟ್ಟು ಬಿಜೆಪಿಗೆ ಸೇರುವ ಮೂಲಕ ದೊಡ್ಡ ತಪ್ಪು ಮಾಡಿದ್ದೇನೆ, ಶಾಸಕ ಯ.ಟಿ.ಖಾದರ್ ಸಹಿತ ಎಲ್ಲರೂ ನನ್ನನ್ನು ಕ್ಷಮಿಸಬೇಕು. ಸಂವಿಧಾನ, ದೇಶದ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಬಹುಮತದಿಂದ ಚುನಾಯಿಸಬೇಕು ಎಂದರು.*