ಡೈಲಿ ವಾರ್ತೆ: 27/April/2024

ಬಿಹಾರದಿಂದ ಕಳ್ಳಸಾಗಾಣಿಕೆಯಾಗುತ್ತಿದ್ದ 95 ಮಕ್ಕಳ ರಕ್ಷಣೆ!

ಲಕ್ನೋ: ಬಿಹಾರದಿಂದ ಉತ್ತರ ಪ್ರದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 95 ಮಕ್ಕಳನ್ನು ಅಯೋಧ್ಯೆಯಲ್ಲಿ ಮಕ್ಕಳ ಆಯೋಗದ ಅಧಿಕಾರಿಗಳು ರಕ್ಷಿಸಿದ್ದಾರೆ. ಈ ಪ್ರಕರಣ ಮಕ್ಕಳ ಕಳ್ಳಸಾಗಣೆಯ ಬಗ್ಗೆ ಆತಂಕವನ್ನು ಹೆಚ್ಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅಯೋಧ್ಯೆಯ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸರ್ವೇಶ್ ಅವಸ್ತಿ, ಯುಪಿ ಮಕ್ಕಳ ಆಯೋಗದ ಸದಸ್ಯೆ ಸುಚಿತ್ರಾ ಚತುರ್ವೇದಿ ಅವರಿಂದ ಮಾಹಿತಿ ಪಡೆದ ಸಿಡಬ್ಲ್ಯೂಸಿ ಸದಸ್ಯರು ಮಕ್ಕಳನ್ನು ರಕ್ಷಿಸಿದ್ದಾರೆ. ಸುಚಿತ್ರಾ ಚತುರ್ವೇದಿಯವರು ಕರೆ ಮಾಡಿ, ಬಿಹಾರದಿಂದ ಅಪ್ರಾಪ್ತ ಮಕ್ಕಳನ್ನು ಅಕ್ರಮವಾಗಿ ಸಹರಾನ್‍ಪುರಕ್ಕೆ ಸಾಗಿಸಲಾಗುತ್ತಿದೆ. ಅವರು ಗೋರಖ್‍ಪುರದಲ್ಲಿದ್ದಾರೆ ಮತ್ತು ಅಯೋಧ್ಯೆಯ ಮೂಲಕ ಹೋಗುತ್ತಾರೆ ಎಂದು ಮಾಹಿತಿ ನೀಡಿದರು. ಮಾಹಿತಿ ಬಂದ ತಕ್ಷಣ ಮಕ್ಕಳನ್ನು ರಕ್ಷಿಸಿದ್ದೇವೆ ಅವರು ತಿಳಿಸಿದ್ದಾರೆ.

ಮಕ್ಕಳನ್ನು ಕರೆತಂದವರಿಗೆ ಪೋಷಕರಿಂದ ಯಾವುದೇ ಒಪ್ಪಿಗೆ ಪತ್ರವಿಲ್ಲ. ಮಕ್ಕಳನ್ನು ಎಲ್ಲಿಗೆ ಕರೆದೊಯ್ಯುತ್ತಿದ್ದಾರೆಂದು ತಿಳಿದಿಲ್ಲ. ಮಕ್ಕಳ ಪೋಷಕರನ್ನು ಸಂಪರ್ಕಿಸಲಾಗುತ್ತಿದೆ. ರಕ್ಷಿಸಲ್ಪಟ್ಟ ಮಕ್ಕಳು 4-12 ವರ್ಷದೊಳಗಿನವರಾಗಿದ್ದಾರೆ. ಮಕ್ಕಳಿಗೆ ಆಹಾರ ಮತ್ತು ವೈದ್ಯಕೀಯ ನೆರವು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.