ಡೈಲಿ ವಾರ್ತೆ: 28/ಮೇ /2024
2024-25 ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವದ ಕುರಿತು ಪೂರ್ವಸಿದ್ಧತಾ ಸಭೆ: ಮಗುವಿಗೆ ತಂದೆ ತಾಯಿ ಭೌತಿಕವಾಗಿ ಜನ್ಮ ನೀಡಿದರೆ ಶಿಕ್ಷಣವು ಬೌದ್ಧಿಕ ಅಸ್ಮಿತೆ,ಆಸ್ತಿತ್ವ ನೀಡುತ್ತದೆ – ಎಂ.ಎ.ರಡ್ಡೇರ
ಲಕ್ಷ್ಮೇಶ್ವರ: ಮಗುವಿಗೆ ತಂದೆ ತಾಯಿ ಭೌತಿಕವಾಗಿ ಜನ್ಮ ನೀಡಿದರೆ ಶಿಕ್ಷಣವು ಬೌದ್ಧಿಕ ಅಸ್ಮಿತೆ,ಆಸ್ತಿತ್ವ ನೀಡುತ್ತದೆ. ಅಂತಹ ಶಿಕ್ಷಣ ಉಳ್ಳವರ ಸೊತ್ತಾಗಬಾರದು” ಎಂದು ಶಾಲಾ ಶಿಕ್ಷಣ ಇಲಾಖೆಯ ಗದಗ ಜಿಲ್ಲಾ ಉಪನಿರ್ದೇಶಕ ಎಂ.ಎ.ರಡ್ಡೇರ ಅಭಿಪ್ರಾಯಪಟ್ಟರು. ಅವರು ಲಕ್ಷ್ಮೇಶ್ವರದ ಎಸ್.ಟಿ.ಪಿ.ಎಂ.ಬಿ ಸಭಾಭವನದಲ್ಲಿ ಹಮ್ಮಿಕೊಂಡ 2024-25 ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವದ ಕುರಿತು ಮುಖ್ಯಶಿಕ್ಷಕರಿಗಾಗಿ ಪೂರ್ವಸಿದ್ಧತಾ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂದುವರೆದು ” ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ಶೈಕ್ಷಣಿಕ ಬಲವರ್ಧನೆಗಾಗಿ 5 ಅಂಶಗಳ ಕಾರ್ಯಕ್ರಮಕ್ಕೆ ಒತ್ತು ನೀಡಲು ಯೋಜಿಸಲಾಗಿದೆ. 1.ಶಾಲಾ ಸ್ವಚ್ಛತೆ ಹಾಗೂ ನೈರ್ಮಲೀಕರಣ 2. ದಾಖಲಾತಿ ಹೆಚ್ಚಿಸಲು ಆಂದೋಲನ 3. ಪರಿಣಾಮಕಾರಿ ಸೇತುಬಂಧ 4. ಇಲಾಖೆಯ ಪ್ರೋತ್ಸಾಹಕ ಯೋಜನೆಗಳ ಸಮಗ್ರ ಪರಿಚಯ 5. ಸಸ್ಯ ಶ್ಯಾಮಲ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲಾಗುತ್ತಿದೆ” ಎಂದರು.
ನೂತನವಾಗಿ ಶಿರಹಟ್ಟಿ ಕ್ಷೇತ್ರಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಎಚ್.ಎನ್.ನಾಯಕ ಮಾತನಾಡಿ “ತಾಲೂಕಿನ ಶಾಲೆ,ಶಿಕ್ಷಣದ ಅಭಿವೃದ್ಧಿಯಾಗಿ ನನ್ನದೇ ಆದ ಹಲವಾರು ಕನಸು ಹೊಂದಿದ್ದು ಅವುಗಳ ಸಾಕಾರಕ್ಕಾಗಿ ತಮ್ಮೆಲ್ಲರ ಸಹಕಾರ ಕೋರುತ್ತೇನೆ” ಎಂದರು.
ನಿರ್ಗಮಿತ ಕ್ಷೇತ್ರಶಿಕ್ಷಣಾಧಿಕಾರಿ ಶ್ರೀಮತಿ ಮಂಗಳಾ ತಾಪಸ್ಕರ “ಬ್ಲಾಕ್ ನ ಮೊದಲ ಬಿ.ಇ.ಓ ಆಗಿ ಬಂದ ನನಗೆ ತಾವೆಲ್ಲ ನೀಡಿದ ಸಹಕಾರ ಮರೆಯಲಾರೆ” ಎಂದು ಧನ್ಯವಾದ ತಿಳಿಸಿದರು.
ಮೂವರು ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಚ್.ಎಸ್.ರಾಮನಗೌಡ್ರ, ಇ.ಸಿ.ಓ ಹರೀಶ ಎಸ್, ಪ್ರೌಢವಿಭಾಗದ ಬಿ.ಆರ್.ಪಿ ಈಶ್ವರ ಮೆಡ್ಲೇರಿ, ಬಿ.ಆರ್.ಪಿ ಬಸವರಾಜ ಯರಗುಪ್ಪಿ ವಿವಿಧ ಕಾರ್ಯಯೋಜನೆಗಳನ್ನು ಮಂಡಿಸಿದರು.
ವೇದಿಕೆಯಲ್ಲಿ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಸ ಎಂ.ಬಿ.ಹೊಸಮನಿ, ಎಸ್.ಟಿ.ಪಿ.ಎಂ.ಬಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಅಯ್.ಬಿ.ಜಕ್ಕನಗೌಡ್ರ, ಗೊಜನೂರ ಶಾಲೆಯ ಮುಖ್ಯಶಿಕ್ಷಕ ಬಿ.ಎಚ್.ನಡುವಿನಮನಿ ಉಪಸ್ಥಿತರಿದ್ದರು. ಹಾಗೂ ಜಿಲ್ಲಾ ಶಿಕ್ಷಕರ ಸಂಘದ ಎಂ ಎಸ್ ಹಿರೇಮಠ ಐ ಎ ನೀರಲಗಿ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕ ಬಿ.ಎಂ.ಕುಂಬಾರ ಸ್ವಾಗತಿಸಿದರು. ಸಿ.ಆರ್.ಪಿ ಗಳಾದ ಜ್ಯೋತಿ ಗಾಯಕವಾಡ ಹಾಗೂ ಕೆ.ಪಿ.ಕಂಬಳಿ ಪ್ರಾರ್ಥಿಸಿದರು. ಉಮೇಶ ನೇಕಾರ ನಿರೂಪಿಸಿದರು. ಸತೀಶ ಬೋಮಲೆ ವಂದಿಸಿದರು.
ಲಕ್ಷ್ಮೇಶ್ವರ ತಾಲೂಕಿನ ಸರಕಾರಿ,ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮುಖ್ಯ ಶಿಕ್ಷಕರು ಹಾಜರಿದ್ದರು.