ಡೈಲಿ ವಾರ್ತೆ: 31/ಮೇ /2024

ಮಗುವಿನಲ್ಲಿ ಮಾನವೀಯ ಮೌಲ್ಯಗಳನ್ನು ಜಾಗೃತಗೊಳಿಸುವುದೇ ಶಿಕ್ಷಣದ ಪ್ರಮುಖ ಉದ್ದೇಶ: ಶಿಕ್ಷಣಾಧಿಕಾರಿ ಎಚ್. ಎನ್. ನಾಯಕ

ಲಕ್ಷ್ಮೇಶ್ವರ: ಮಗುವಿನಲ್ಲಿ ಮಾನವೀಯ ಮೌಲ್ಯಗಳನ್ನು ಜಾಗೃತಗೊಳಿಸುವುದೇ ಶಿಕ್ಷಣದ ಪ್ರಮುಖ ಉದ್ದೇಶ. ಶಿಕ್ಷಕರು ಪಠ್ಯ ವಿಷಯಕ್ಕೆ ಮಾತ್ರ ಸೀಮಿತರಾಗದೆ ವಿದ್ಯಾರ್ಥಿಗಳನ್ನು ಹೊರ ಜಗತ್ತಿಗೆ ಸಮನ್ವಯಗೊಳಿಸುವ ಕಾರ್ಯ ಮಾಡಬೇಕು” ಎಂದು ಶಿರಹಟ್ಟಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್.ಎನ್. ನಾಯಕ ಅಭಿಪ್ರಾಯ ಪಟ್ಟರು. ಅವರು ಲಕ್ಷ್ಮೇಶ್ವರ ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ನಂ.2,  ಸ.ಮಾ.ಪ್ರಾ.ಹೆ.ಮ ಶಾಲೆ ಹಾಗೂ ತಾ.ಪಾ.ಮ.ಬ ಪ್ರಾಥಮಿಕ ಶಾಲೆ ಇವರ ಸಹಯೋಗದಲ್ಲಿ ಹಮ್ಮಿಕೊಂಡ  2024-25ರ ಶಾಲಾ ಪ್ರಾರಂಭೋತ್ಸವದ ತಾಲೂಕ ಮಟ್ಟದ ಸಾಂಕೇತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಬೆಳಿಗ್ಗೆ 9:30ಕ್ಕೆ ದಾಖಲಾತಿ ಆಂದೋಲನದ ಭಾಗವಾಗಿ ಜಾಗೃತಿ ಮೂಡಿಸಲು ಪ್ರಭಾತಪೇರಿಯನ್ನು ಉದ್ಘಾಟಿಸಿದ ಡಿ.ಡಿ.ಪಿ.ಐ ಕಾರ್ಯಾಲಯದ ಎ.ಪಿ.ಸಿ.ಓ ಎಸ್.ಕೆ.ಹವಾಲ್ದಾರ ಮಾತನಾಡಿ “2024-25ರ ಶೈಕ್ಷಣಿಕ ವರ್ಷದಲ್ಲಿ ಮಾನ್ಯ ಡಿಡಿಪಿಐ ರವರು ಶೈಕ್ಷಣಿಕ ಬಲವರ್ಧನೆಗಾಗಿ ಐದು ಅಂಶಗಳ ಕಾರ್ಯಕ್ರಮವನ್ನು ಯೋಜಿಸಿದ್ದು ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ” ಎಂದರು. ನೌಕರರ ಸಂಘದ ತಾಲೂಕಾಧ್ಯಕ್ಷ ಡಿ.ಎಚ್.ಪಾಟೀಲ ಪ್ರಭಾತಪೇರಿಗೆ ಚಾಲನೆ ನೀಡಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ, ಹೂಗುಚ್ಛ ನೀಡಿ ಸ್ವಾಗತ ನೀಡಲಾಯಿತು. ವೇದಿಕೆಯಲ್ಲಿದ್ದ ಶಿಕ್ಷಕರ ಹಾಗೂ ನೌಕರರ ಸಂಘಟನೆಗಳ ಪದಾಧಿಕಾರಿಗಳು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರವನ್ನು ವಿತರಿಸಿದರು. ನೂತನವಾಗಿ ಅಧಿಕಾರ ವಹಿಸಿಕೊಂಡ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವೇದಿಕೆ ಮುಖಾಂತರ ಸನ್ಮಾನಿಸಲಾಯಿತು. ಸ.ಮಾ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಎಸ್.ಎಸ್.ಜಿರಂಕಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಘಟಕದ ಅಧ್ಯಕ್ಷ ಬಿ.ಎಸ್.ಹರ್ಲಾಪುರ ಅತಿಥಿಪರ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಎಂ.ಹವಳದ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಬಿ.ಹೊಸಮನಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎನ್. ಮುಳಗುಂದ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರು ನೇಕಾರ, ಇ.ಸಿ.ಓ ಉಮೇಶ ಹುಚ್ಚಯ್ಯನಮಠ, ಸಂಘದ ಪದಾಧಿಕಾರಿಗಳಾದ ಎಚ್. ಎಮ್.ಗುತ್ತಲ, ಎನ್.ಎನ್. ಸುಣಗಾರ, ವಿಕಲಚೇತನ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಎಂ.ಶಿರಹಟ್ಟಿ, ಡಿ.ಎನ್.ದೊಡ್ಡಮನಿ, ಪಿ.ಎಚ್. ಕೊಂಡಾಬಿಂಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸ.ಮಾ.ಪ್ರಾ.ಹೆ.ಮ ಶಾಲೆಯ ಮುಖ್ಯೋಪಾಧ್ಯಾಯ ಬಿ.ಎಂ. ಕುಂಬಾರ ಸ್ವಾಗತಿಸಿದರು. ಪ್ರೌಢಶಾಲಾ ವಿಭಾಗದ ಬಿ.ಆರ್.ಪಿ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ಶ್ರೀಮತಿ ಸಿ.ಎಫ್. ಪಾಟೀಲ, ಕೆ.ಆರ್. ಮುದಕಣ್ಣವರ, ಪಿ.ಎಮ್. ಅಡ್ನೂರ ಪ್ರಾರ್ಥಿಸಿದರು. ಉತ್ತರ ವಲಯದ ಸಿ.ಆರ್.ಪಿ ಉಮೇಶ ನೇಕಾರ ನಿರೂಪಿಸಿದರು. ದಕ್ಷಿಣ ವಲಯದ ಸಿ.ಆರ್‌.ಪಿ ಸತೀಶ ಬೋಮಲೆ ವಂದಿಸಿದರು. ಮೂರು ಶಾಲೆಗಳ ಸಹ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು. ಶಾಲೆಯ ಆರಂಭದ ಮೊದಲ ದಿನವೇ ಬಹಳಷ್ಟು ವಿದ್ಯಾರ್ಥಿಗಳು ಅತ್ಯಂತ ಸಂಭ್ರಮದಿಂದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಕಂಡುಬಂದಿತು.