ಡೈಲಿ ವಾರ್ತೆ: 01/ಜೂ./2024

ಅರ್ಕುಳದ ಡಾ.ತುಂಗಾಸ್ ಮನಸ್ವಿನಿ ಆಸ್ಪತ್ರೆಗೆ ಯು.ಟಿ.ಖಾದರ್ ಭೇಟಿ , ಆಸ್ಪತ್ರೆಗೆ ಸರಕಾರದಿಂದ ಸಿಗುವ ಸಹಕಾರ ನೀಡಲು ಬದ್ಧ

ಬಂಟ್ವಾಳ : ಫರಂಗಿಪೇಟೆಯ ಅರ್ಕುಳದಲ್ಲಿ ಕಾರ್ಯಾಚರಿಸಲಿರುವ ಡಾ| ತುಂಗಾಸ್ ಮನಸ್ವಿನಿ ಆಸ್ಪತ್ರೆಯು ಜಿಲ್ಲೆಯ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯಾಗಲಿದ್ದು, ಹೀಗಾಗಿ ಆಸ್ಪತ್ರೆಯ ಯಶಸ್ವಿ ಕಾರ್ಯಾಚರಣೆಗೆ ಬೇಕಿರುವ ಎಲ್ಲಾ ರೀತಿಯ ಸಹಕಾರ ನೀಡುವುದಕ್ಕೆ ರಾಜ್ಯ ಸರಕಾರ ಬದ್ಧವಾಗಿದೆ ಎಂದು ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

   

ಅವರು ಫರಂಗಿಪೇಟೆಯ ಅರ್ಕುಳದಲ್ಲಿ ಜೂ. 9ರಂದು ಉದ್ಘಾಟನೆಗೊಳ್ಳಲಿರುವ ಮಾನಸಿಕ ರೋಗ ಚಿಕಿತ್ಸಾ ತಜ್ಞ ಡಾ| ರವೀಶ ತುಂಗ ಐರೋಡಿ ಅವರ ನೇತೃತ್ವದ ಡಾ| ತುಂಗಾಸ್ ಮನಸ್ವಿನಿ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್.ಆರ್.ತಿಮ್ಮಯ್ಯ ಅವರ ಉಪಸ್ಥಿತಿಯಲ್ಲಿ ಆಸ್ಪತ್ರೆಯ ವೈದ್ಯಕೀಯ ತಂಡದ ಜತೆ ಸಮಾಲೋಚನೆ ನಡೆಸಿದರು.
ಮಾನಸಿಕ ರೋಗ ಚಿಕಿತ್ಸೆಗೆ ಆಯುಷ್ಮಾನ್ ಯೋಜನೆಯಲ್ಲಿ ಅವಕಾಶಗಳಿವೆಯೇ ಎಂಬುದನ್ನು ಪರಿಶೀಲಿಸಿಕೊಂಡು ಅದಕ್ಕೆ ಮನಸ್ವಿನಿ ಆಸ್ಪತ್ರೆಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಈ ಕುರಿತು ವಿವರವಾದ ಮನವಿಯನ್ನು ಸರಕಾರಕ್ಕೆ ಸಲ್ಲಿಸುವಂತೆ ವಿಧಾನಸಭಾಧ್ಯಕ್ಷರು ಡಾ| ರವೀಶ ತುಂಗ ಅವರಿಗೆ ತಿಳಿಸಿದರು.

   ಮಾನಸಿಕ ರೋಗಕ್ಕೆ ಸಂಬಂಧಿಸಿ ಇಷ್ಟೊಂದು ಗುಣಮಟ್ಟದ ಚಿಕಿತ್ಸೆ ನೀಡುವುದು ಸರಕಾರದಿಂದ ಸಾಧ್ಯವಿಲ್ಲ. ಆದರೆ ಈ ಭಾಗದ ಜನರಿಗೆ ಅದರ ಚಿಕಿತ್ಸೆ ಕಲ್ಪಿಸಲು ಆರಂಭಗೊಂಡಿರುವ ಮನಸ್ವಿನಿ ಆಸ್ಪತ್ರೆಗೆ ಸರಕಾರದಿಂದ ಬೇಕಿರುವ ಎಲ್ಲಾ ರೀತಿಯ ಸಹಕಾರವನ್ನು ನಾವು ನೀಡಬೇಕು. ಈ ಕುರಿತು ಆಸ್ಪತ್ರೆಯಿಂದ ಯಾವುದೇ ಬೇಡಿಕೆಗಳಿದ್ದರೂ, ಡಿಎಚ್‌ಒ ಮೂಲಕ ಸರಕಾರಕ್ಕೆ ಸಲ್ಲಿಸಿ, ಆರೋಗ್ಯ ಸಚಿವರ ಜತೆ ಚರ್ಚಿಸಿಕೊಂಡು ಅದನ್ನು ದೊರಕಿಸಿಕೊಡಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಇಂತಹ ಆಸ್ಪತ್ರೆಯಿಂದ ಮೇರಮಜಲಿನಂತಹ ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳಿಗೂ ಕೊಡುಗೆ ಲಭಿಸಿದಂತಾಗುತ್ತದೆ ಎಂದರು.

    ಆಸ್ಪತ್ರೆಯ ಮುಖ್ಯಸ್ಥ ಡಾ| ರವೀಶ್ ತುಂಗ, ಡಾ.ಸುಚಿತ್ರ ಆರ್.ತುಂಗ, ಡಾ| ಹಂಸರಾಜ್ ಆಳ್ವ, ಸಿವಿಲ್ ವಿಭಾಗದ ಎಂಜಿನಿಯರ್ ಅರ್ಜುನ್ ಪೂಂಜ, ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್, ಪುದು ಗ್ರಾ.ಪಂ.ಅಧ್ಯಕ್ಷೆ ರಶೀದಾ ಬಾನು, ಮಾಜಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ,  ಮಾಜಿ ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಮೇರಮಜಲು ಗ್ರಾ.ಪಂ.ಸದಸ್ಯೆ ವೃಂದಾ ಪೂಜಾರಿ, ವೈದ್ಯ ಡಾ| ಸುಜಯ್ ಭಂಡಾರಿ, ಜನಜಾಗೃತಿ ವೇದಿಕೆಯ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಿಸ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಯೋಜನಾಧಿಕಾರಿ ಬಾಲಕೃಷ್ಣ, ಪ್ರಮುಖರಾದ ವಸಂತ ಶೆಟ್ಟಿ, ವಿನಾಯಕ ಪ್ರಭು, ಸುಕೇಶ್ ಶೆಟ್ಟಿ ತೇವು ಮೊದಲಾದವರಿದ್ದರು.