ಡೈಲಿ ವಾರ್ತೆ: 08/ಜೂ./2024
ಕೋಟೇಶ್ವರ: ಗಾಳಿ – ಮಳೆಗೆ ಮುರಿದು ಬಿದ್ದ ಬೃಹತ್ ಮರದ ಕೊಂಬೆ – ತಪ್ಪಿದ ಹಾನಿ
ಕುಂದಾಪುರ : ಕೋಟೇಶ್ವರ ರಥಬೀದಿಯಲ್ಲಿನ ಶ್ರೀ ಮಾರಿಯಮ್ಮ ದೇವಾಲಯದ ಸಮೀಪ ಇರುವ ಶ್ರೀ ನಾಗ ದೇವಸ್ಥಾನದ ಹಿಂಬದಿ ಅದಕ್ಕೆ ಹೊಂದಿಕೊಂಡಂತೆ ಇರುವ ಪುರಾತನವಾದ ಬೃಹತ್ ಹುಣಿಸೆ ಮರದ ಕೊಂಬೆಯೊಂದು ಶುಕ್ರವಾರ ಸಂಜೆ ಬೀಸಿದ ಬಲವಾದ ಗಾಳಿಗೆ ಮುರಿದು ಬಿದ್ದಿದೆ. ಮಳೆ ಬಂದಿದ್ದರಿಂದ ಚಿಗುರಿ ಸೊಪ್ಪು ಹೇರಿಕೊಂಡಿರುವ ಈ ಕೊಂಬೆ ಸುಮಾರು ಐದಾರು ಟನ್ ಭಾರವಿರಬಹುದು ಎಂದು ಅಂದಾಜಿಸಲಾಗಿದೆ. ಸಂಜೆ ವೇಳೆಯಲ್ಲಿ ಸುರಿದ ಮಳೆಯೊಂದಿಗೆ ಬೀಸಿದ ಬಲವಾದ ಗಾಳಿಗೆ ಇದು ಮುರಿದಿರಬಹುದು. ದೇವಸ್ಥಾನದ ಬಲ ಪಾರ್ಶ್ವದಲ್ಲಿ ಸರಿದು ಕುಳಿತಂತೆ ಬಿದ್ದಿರುವ ಈ ಕೊಂಬೆ ದೇವಾಲಯದ ಗೋಡೆ, ಎದುರಿನ ಮಾಡು ಹಾಗೂ ವಿದ್ಯುತ್ ಸಂಪರ್ಕಕ್ಕೆ ಕಿಂಚಿತ್ತೂ ಹಾನಿ ಮಾಡಲಿಲ್ಲ. ಆದರೆ ಹೊರಗಿನಿಂದ ಪ್ರದಕ್ಷಿಣೆ ಬರಲು ಅಡಚಣೆಯುಂಟಾಗಿದೆ.
ಕಳೆದ ಎರಡು ತಿಂಗಳ ಹಿಂದಷ್ಟೇ ದೇವಸ್ಥಾನದ ಬಲ ಪಾರ್ಶ್ವದಲ್ಲಿಯೂ ಇದೇ ರೀತಿ ಒಂದು ಕೊಂಬೆ ಮುರಿದು ಬಿದ್ದಿತ್ತು. ಆಗಲೂ ಕಟ್ಟಡಕ್ಕೇನೂ ಹಾನಿಯಾಗಿರಲಿಲ್ಲ. ಅದನ್ನು ತೆರವುಗೊಳಿಸಲಾಗಿತ್ತು.
ದೇವಸ್ಥಾನದ ಮುಂಭಾಗದ ಜಮೀನಿನಲ್ಲಿ ಕಾರ್ಯನಿರತರಾಗಿದ್ದ ಕಾರ್ಮಿಕರು ಈ ಬೃಹತ್ ಕೊಂಬೆ ಚರಚರ ಶಬ್ದದೊಂದಿಗೆ ನಿಧಾನವಾಗಿ ಮುರಿದು ಧರಾಶಾಯಿಯಾಗುವುದನ್ನು ಕಂಡು ದೂರ ಓಡಿದರು! ಇದರಿಂದ ಯಾವುದೇ ಹಾನಿ ಸಂಭವಿಸಿಲ್ಲ.