ಡೈಲಿ ವಾರ್ತೆ: 09/ಜೂ./2024

ಮೂರನೇ ಬಾರಿ ದೇಶದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ದೇಶದಲ್ಲಿ ಸತತ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅಧಿಕಾರ ಗ್ರಹಣ ಮಾಡಿದ್ದು, ಹೊಸ ಇತಿಹಾಸ ನಿರ್ಮಿಸಿದ್ದಾರೆ. ಜವಾಹರಲಾಲ್ ನೆಹರು ಬಳಿಕ ಮೂರನೇ ಬಾರಿಗೆ ಪ್ರಧಾನಿಯಾದ ದೇಶದ ಮತ್ತೊಬ್ಬ ವ್ಯಕ್ತಿಯಾಗಿ ಮೋದಿ ಹೊರಹೊಮ್ಮಿದ್ದಾರೆ.

73 ವರ್ಷದ ನರೇಂದ್ರ ಮೋದಿ ರಾಷ್ಟ್ರಪತಿ ಭವನದ ಮುಂದೆ ನಡೆದ ಐತಿಹಾಸಿಕ ಸಮಾರಂಭದಲ್ಲಿ ಇತರ 72 ಸಚಿವರೊಂದಿಗೆ ಪ್ರಮಾಣ ಸ್ವೀಕರಿಸಿದ್ದಾರೆ. ಇದರಲ್ಲಿ 11 ಮಂದಿ NDA ಮೈತ್ರಿಕೂಟದ ಸಚಿವರು ಸೇರಿದ್ದಾರೆ.
30 ಸಂಪುಟ ದರ್ಜೆ, ಐದು ಸ್ವತಂತ್ರ ರಾಜ್ಯ ಖಾತೆ ಮತ್ತು 36 ರಾಜ್ಯ ಖಾತೆ ಸಚಿವರಾಗಿ ಪದ ಗ್ರಹಣ ಮಾಡಿದ್ದಾರೆ. ಯಾರಿಗೆ ಯಾವ ಖಾತೆ ಎನ್ನುವುದನ್ನು ಹೇಳಲಾಗಿಲ್ಲ.
18 ಮಂದಿ ಹಾಲಿ ಹಿರಿಯ ಸಚಿವರು ಕೇಂದ್ರ ಸಂಪುಟದಲ್ಲಿ ಮುಂದುವರಿಯಲಿದ್ದಾರೆ. ಉಳಿದಂತೆ, 27 ಮಂದಿ ಓಬಿಸಿ, ಹತ್ತು ಮಂದಿ ಎಸ್ಸಿ, ಐದು ಎಸ್ಟಿ ಮತ್ತು ಐದು ಅಲ್ಪಸಂಖ್ಯಾತ ವರ್ಗದವರು ಇದ್ದಾರೆ. ಈ ಹಿಂದೆ ಸಚಿವ ಸ್ಥಾನದಲ್ಲಿದ್ದ ರಾಜನಾಥ್ ಸಿಂಗ್, ಅಮಿತ್ ಷಾ, ಪಿಯೂಷ್ ಗೋಯಲ್, ಅಶ್ವಿನಿ ವೈಷ್ಣವ್, ಎಸ್.ಜೈಶಂಕ‌ರ್, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ, ಪ್ರಹ್ಲಾದ ಜೋಷಿ, ಗಿರಿರಾಜ್ ಸಿಂಗ್, ಧರ್ಮೇಂದ್ರ ಪ್ರಧಾನ್, ಕಿರಣ್ ರಿಜಿಜು ಮತ್ತೆ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ.

ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಜೆಪಿ ನಡ್ಡಾ, ಹರ್ಯಾಣ ಮಾಜಿ ಸಿಎಂ ಮನೋಹರ ಲಾಲ್ ಖಟ್ಟರ್ ಅವರೂ ಕೇಂದ್ರ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ
ಇದಲ್ಲದೆ, ಕರ್ನಾಟಕದ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ಹಿಂದುಸ್ತಾನ್ ಅವಾಮ್ ಮೋರ್ಚಾದ ಜಿತನ್ ರಾಮ್ ಮಾಂಜಿ, ಜೆಡಿಯು ಪಕ್ಷದ ಲಲನ್ ಸಿಂಗ್, ಟಿಡಿಪಿಯ ರಾಮಮೋಹನ್ ನಾಯ್ಡು ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಪಡೆದಿದ್ದಾರೆ. ಉಳಿದಂತೆ, ಗುಜರಾತ್ ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ್, ಸುಂದರ್ ಗರ್ ಕ್ಷೇತ್ರದ ಆರು ಬಾರಿಯ ಸಂಸದ ಜುವಾಲ್ ಓರಾಮ್, ಗಜೇಂದ್ರ ಸಿಂಗ್ ಶೇಖಾವತ್, ಅನ್ನಪೂರ್ಣ ದೇವಿ, ಹರ್ದೀಪ್ ಸಿಂಗ್ ಪುರಿ, ಡಾ.ಮನ್ಸುಖ್ ಮಾಂಡವೀಯ, ಆಂಧ್ರಪ್ರದೇಶದ ಕಿಶನ್ ರೆಡ್ಡಿ, ಚಿರಾಗ್ ಪಾಸ್ವಾನ್ ಅವರೂ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ.

ರಾಜ್ಯ ಖಾತೆ ಮಂತ್ರಿಗಳಾಗಿ ಇಂದ್ರಜಿತ್ ಸಿಂಗ್, ಜಿತೇಂದರ್ ಸಿಂಗ್, ಅರ್ಜುನ್ ರಾಮ್ ಮೇಘವಾಲ್, ಪ್ರತಾಪರಾವ್‌ ಗಣಪತಿ ರಾವ್ ಜಾಧವ್, ಆರ್ ಎಲ್ ಡಿ ಸಂಸದ ಜಯಂತ್ ಚೌಧರಿ, ಜಿತಿನ್ ಪ್ರಸಾದ್, ಶ್ರೀಪಾದ್‌ ಯಸ್ಸೋ ನಾಯ್ಕ, ಪಂಕಜ್ ಚೌಧರಿ, ಕೃಷ್ಣ ಪಾಲ್ ಗುರ್ಜರ್, ನಿತ್ಯಾನಂದ ರಾಯ್, ಅನುಪ್ರಿಯಾ ಪಟೇಲ್, ತುಮಕೂರು ಸಂಸದ ವಿ.ಸೋಮಣ್ಣ,  ಟಿಡಿಪಿಯ ಪೆಮ್ಮಸಾನಿ ಚಂದ್ರಶೇಖ‌ರ್, ಪ್ರೊ.ಎಸ್.ಪಿ.ಸಿಂಗ್ ಬಾಘೇಲ್, ಬೆಂಗಳೂರು ಉತ್ತರ ಸಂಸದೆ ಶೋಭಾ ಕರಂದ್ಲಾಜೆ, ಕೀರ್ತಿ ವರ್ಧನ್ ಸಿಂಗ್, ಬಿ.ಎಲ್ ವರ್ಮಾ, ಶಂತನು ಠಾಕೂರ್, ತ್ರಿಶೂರು ಸಂಸದ ಸುರೇಶ್ ಗೋಪಿ, ಅಜಯ್ ತಮಟಾ, ತೆಲಂಗಾಣದ ಫೈರ್ ಪ್ರಾಂಡ್ ಸಂಸದ ಬಂಡಿ ಸಂಜಯ್, ಭಾಗೀರಥ್ ಮೋದಿ ಮತ್ತಿತರರು ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ.

ಐತಿಹಾಸಿಕ ಕಾರ್ಯಕ್ರಮದಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳ ನಾಯಕರು ಪಾಲ್ಗೊಂಡಿದ್ದರು. ಅಲ್ಲದೆ, ದೇಶ- ವಿದೇಶದ ಎಂಟು ಸಾವಿರ ಗಣ್ಯರು ಭಾಗವಹಿಸಿದ್ದರು. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿವಿಧ ರಾಜ್ಯಗಳ ಬಿಜೆಪಿ ಶಾಸಕರು, ರಾಜ್ಯ ಘಟಕದ ಅಧ್ಯಕ್ಷರು, ಬಿಜೆಪಿ ಸಂಸದರು ಪಾಲ್ಗೊಂಡಿದ್ದರು.