ಡೈಲಿ ವಾರ್ತೆ: 12/ಜೂ./2024
ಕುಂದಾಪುರ: ಮಳೆಯಲ್ಲೇ ನಡೆಯುವ ವಿಠಲವಾಡಿಯ ಚಟ್ ಕೆರೆ ಹೂಳೆತ್ತುವ ಕಾಮಗಾರಿ – ಅನುಮಾನಕ್ಕೆಡೆ ಮಾಡಿದ ಪುರಸಭೆಯ ನಡೆ
ಕುಂದಾಪುರ ವಿಠಲವಾಡಿ ರಸ್ತೆಗೆ ಹೋಗುವ ದಾರಿಯಲ್ಲಿ ಚಟ್ ಕೆರೆ ಕಾಮಗಾರಿ ನಡೆಯುತ್ತಿದ್ದು, ಜೋರಾಗಿ ಮಳೆ ಸುರಿಯುವ ಈ ಸಮಯದಲ್ಲೇ ಗುತ್ತಿಗೆದಾರರು ಕೆರೆ ಕಾಮಗಾರಿ ನಡೆಸುತ್ತಿರುವುದು
ಪರಿಸರದ ಜನರಲ್ಲಿ ಕುತೂಹಲ ಮೂಡಿಸಿದೆ. ಇದು ಕಳಪೆ ಕಾಮಗಾರಿಯನ್ನು ಮುಚ್ಚುವ ಯತ್ನ ಎಂದೇ ಭಾವಿಸಲಾಗಿದೆ.
ಕಾಮಗಾರಿ ಸಮಯದಲ್ಲಿ ಕೆರೆಯ ಹೂಳು ಎತ್ತುವಾಗ ಕೆರೆಯ ಸುತ್ತ ಕಟ್ಟಲಾದ ತಡೆಗೋಡೆಯ ಅಡಿಯಲ್ಲಿರುವ ಹೂಳನ್ನು ತೆಗೆದಿದ್ದು ಅದು ಮಟ್ಟು ಬಿದ್ದು ಕೆರೆ ದಂಡೆಯೇ ಕುಸಿಯುವ ಭೀತಿ ಉಂಟಾಗಿದೆ. ಕಾಮಗಾರಿ ಗುತ್ತಿಗೆದಾರ ಹೂಳು ಎತ್ತುವ ಮಣ್ಣನ್ನೆ ತಡೆಗೊಡೆಯ ಅಡಿಗೆ ತುಂಬಿರುವುದರಿಂದ ಮಣ್ಣು ಸಡಿಲಗೊಂಡು, ಈ ಮೊದಲು ಕಟ್ಟಿರುವ ತಡೆಗೋಡೆ ಕುಸಿದು ಬಿದ್ದು, ಮೇಲೆ ವಿದ್ಯುತ್ ಸಂಪರ್ಕಕ್ಕೆ ಹಾಕಿರುವ ಕಂಬ ಕೂಡ ದರೆಗುರುಳಿದೆ. ಇದರಿಂದ ಆಪಾರ ನಷ್ಟ ವಾಗಿದೆ. ಸ್ಥಳೀಯರು ಹೇಳುವ ಪ್ರಕಾರ, ಇದೊಂದು ಕಳಪೆ ಕಾಮಗಾರಿ ಎಂಬುದು ಮೇಲ್ನೋಟಕ್ಕೇ ಅರಿವಾಗುತ್ತದೆ.
ಇದೆ ರೀತಿ ಮುಂದುವರಿದರೆ, ಹತ್ತಿರ ಇರುವ ವಿದ್ಯುತ್ ಪರಿವರ್ತಕವು ಕೆರೆಗೆ ಬೀಳುವ ಸಾಧ್ಯತೆ ಇದೆ. ಮಳೆ ಸುರಿಯುತ್ತಿರುವಾಗಲೇ ಕೆಲಸ ಮುಂದುವರೆಸುತ್ತಿದ್ದು, ಸ್ಥಳದಲ್ಲಿ ಹಾಕಿರುವ ಸಿಮೆಂಟ್ ಕೂಡ ತೊಳೆದು ಹೋಗುತ್ತಿದೆ.
ಸ್ಥಳೀಯ ಪುರಸಭೆಯ ಸಂಬಂಧಿತರು ಹತ್ತಿರವಿದ್ದು ಕಾಮಗಾರಿಯ ಗುಣಮಟ್ಟ ಪರಿಶೀಲನೆ ಮಾಡದಿರುವುದು ವಿಪರ್ಯಾಸವೆ ಸರಿ. ಇದು ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಂಬಂಧ ಪಟ್ಟ ಅಧಿಕಾರಿಗಳು ಪರಿಶೀಲಿಸಿ ಮಳೆ ಬಿಟ್ಟ ಸಂದರ್ಭದಲ್ಲಿ ಕಾಮಗಾರಿ ಮಾಡಲು ಸೂಚನೆ ನೀಡುವುದು ಒಳ್ಳೆಯದು ಎನ್ನುತ್ತಾರೆ ಸ್ಥಳೀಯರು. ಇದೇ ರೀತಿ ಮಳೆಯಲ್ಲಿ ಹೂಳೆತ್ತುವ, ಸಿಮೆಂಟ್ ಹಾಕುವ ಕಾಮಗಾರಿ ನಡೆಸಿದರೆ ಹಣ ಪೋಲಾಗುವುದಲ್ಲದೆ ಬೇರೆ ಪ್ರಯೋಜನವಾಗದು. ಇದು ಸುಮ್ಮನೇ ಗುತ್ತಿಗೆದಾರರ ಬಿಲ್ ಪಾಸ್ ಮಾಡಲು ನಡೆಸುವ ಕಾಮಗಾರಿಯಂತೆ ಕಾಣುತ್ತದೆ ಎಂದು ದೂರಲಾಗಿದೆ. ಈ ಬಗ್ಗೆ ಪುರಸಭೆ ಸ್ಪಷ್ಟನೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.