ಡೈಲಿ ವಾರ್ತೆ: 13/ಜೂ./2024
ರೇಣುಕಾ ಸ್ವಾಮಿ ಕೊಲೆ ಪ್ರಕರಣ: ಶವ ವಿಲೇವಾರಿಗೆ 30 ಲಕ್ಷ ರೂ. ನೀಡಿದ್ದ ದರ್ಶನ್ – ಶವ ಸಾಗಾಟಕ್ಕೆ ಬಳಸಿದ್ದ ಸ್ಕಾರ್ಪಿಯೋ ಸೀಜ್
ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಕೆಲವು ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿದ್ದು, ಶವವನ್ನು ಸಾಗಿಸಲು ದರ್ಶನ್ ಇತರ ಆರೋಪಿಗಳಿಗೆ 30 ಲಕ್ಷ ರೂ. ನೀಡಿದ್ದಾರೆ ಎಂದು ಹೇಳಲಾಗಿದೆ.
ಇದೇ ವೇಳೆ ದರ್ಶನ್ ಆಪ್ತನಾಗಿರುವ ಆರೋಪಿ ದೀಪಕ್, ಪೊಲೀಸರಿಗೆ ಶರಣಾದ ನಾಲ್ವರಿಗೆ ತಲಾ 5 ಲಕ್ಷ ರೂ. ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಜೂ. 8ರಂದು ರಾತ್ರಿ 10 ಗಂಟೆ ಸುಮಾರಿಗೆ ತೀವ್ರ ಹಲ್ಲೆಯಿಂದ ರೇಣುಕಾಸ್ವಾಮಿ ಮೃತ ಪಟ್ಟಿದ್ದಾರೆ ಎಂಬುದನ್ನು ತಿಳಿದ ದರ್ಶನ್, ಆತಂಕದಿಂದ ಪಟ್ಟಣಗೆರೆ ಶೆಡ್‌ಗೆ ಬಂದಿದ್ದಾರೆ. ಅನಂತರ ರೇಣುಕಾಸ್ವಾಮಿ ಮೃತದೇಹ ಕಂಡು ಸುಮಾರು ಒಂದೂವರೆ ತಾಸು ಅಲ್ಲಿಯೇ ಇದ್ದು, ಮೃತದೇಹವನ್ನು ಬೇರೆಡೆ ಸಾಗಿಸಲು ಸಂಚು ರೂಪಿಸಿದ್ದಾರೆ. ಆಗ ದರ್ಶನ್, 30 ಲಕ್ಷ ರೂ. ನೀಡುತ್ತೇನೆ. ಮೃತದೇಹವನ್ನು ಬೇರೆ ಎಲ್ಲಾದರೂ ಬಿಸಾಕಿ ಬಿಡಿ ಎಂದು ತನ್ನ ಆಪ್ತ, ಹೊಟೇಲ್ ಉದ್ಯಮಿ ಪ್ರದೋಶ್‌ಗೆ ಸೂಚಿಸಿದ್ದಾರೆ. ಬಳಿಕ ಪ್ರದೋಶ್ ಹಾಗೂ ಇತರರು ಶವವನ್ನು ಸ್ಕಾರ್ಪಿಯೋ ಕಾರಿನಲ್ಲಿ ಕೊಂಡೊಯ್ದು ಸತ್ವ ಅಪಾರ್ಟ್‌ಮೆಂಟ್ ಮುಂಭಾಗದ ಮೋರಿಗೆ ಎಸೆದಿದ್ದಾರೆ.
ತಲಾ 5 ಲಕ್ಷ ರೂ. ಕೊಟ್ಟಿದ್ದ ದರ್ಶನ್ ಆಪ್ತ ದೀಪಕ್
ಶವ ಪತ್ತೆಯಾದ ಕೂಡಲೇ ದರ್ಶನ್ ಆಪ್ತ ದೀಪಕ್, ಚಿತ್ರದುರ್ಗದ ರಾಘವೇಂದ್ರ, ದರ್ಶನ್ ಕಾರು ಚಾಲಕ ಕಾರ್ತಿಕ್, ನಿಖೀಲ್ ನಾಯಕ್, ಕೇಶವ ಮೂರ್ತಿಗೆ ಕೊಲೆ ಪ್ರಕರಣದಲ್ಲಿ ಶರಣಾಗುವಂತೆ ಸೂಚಿಸಿದ್ದ. ಅಲ್ಲದೆ ಕೊಲೆಯಲ್ಲಿ ದರ್ಶನ್ ಹೆಸರು ಬರಬಾರದು. ಅದಕ್ಕಾಗಿ ತಲಾ 5 ಲಕ್ಷ ರೂ. ನೀಡುತ್ತೇನೆ ಎಂದಿದ್ದ.
ಕೇಶವ ಮೂರ್ತಿ ಮತ್ತು ನಿಖೀಲ್‌ಗೆ ಸ್ಥಳದಲ್ಲೇ 5 ಲಕ್ಷ ರೂ. ಕೊಟ್ಟಿದ್ದಾನೆ. ರಾಘವೇಂದ್ರ ಮತ್ತು ಕಾರ್ತಿಕ್ ಜೈಲಿಗೆ ಹೋದ ಬಳಿಕ, ಅವರ ಮನೆಯವರಿಗೆ ಹಣ ತಲುಪಿಸುತ್ತೇನೆ. ವಕೀಲರ ಶುಲ್ಕ ಕೂಡ ನಾನೇ ಕೊಡುತ್ತೇನೆ ಎಂದು ಹೇಳಿದ್ದಾಗಿ ಶರಣಾದ ಆರೋಪಿಗಳು ಹೇಳಿದ್ದರು.
ರೇಣುಕಾಸ್ವಾಮಿ ಶವ ಸಾಗಾಟಕ್ಕೆ ಬಳಸಿದ್ದ ಸ್ಕಾರ್ಪಿಯೋ ಸೀಜ್:
ಕೊಲೆಯ ಬಳಿಕ ರೇಣುಕಾಸ್ವಾಮಿ ಮೃತದೇಹ ಸಾಗಿಸಲು ಬಳಸಿದ್ದ ಸ್ಕಾರ್ಪಿಯೋ ಕಾರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸೀಜ್ ಮಾಡಿದ್ದಾರೆ. ಇದೀಗ ಶವ ಸಾಗಿಸಲು ನೆರವಾದ ಗ್ಯಾರೇಜ್ ಮಂಜನಿಗಾಗಿ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ.
ಕೆಎ 03 ಎಂಯು 8821 ನಂಬರ್ ನ ಕಾರು ಆರ್.ಆರ್.ನಗರ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷನ ಮನೆ ಬಳಿ ನಿಂತಿತ್ತು. ಬುಧವಾರ ರಾತ್ರಿಯೇ ಕಾರು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ತಂದಿದ್ದಾರೆ. ಈ ಕಾರು ಪುನಿತ್ ಎಂ.ಆರ್.ಎಂಬವರ ಹೆಸರಿನಲ್ಲಿದೆ.