ಡೈಲಿ ವಾರ್ತೆ: 21/ಜೂ./2024
ಎಚ್ಡಿ ರೇವಣ್ಣ ಕುಟುಂಬಕ್ಕೆ ಮತ್ತೊಂದು ಶಾಕ್: ಸೂರಜ್ ರೇವಣ್ಣ ವಿರುದ್ದ ಅಸಹಜ ಲೈಂಗಿಕ ದೌರ್ಜನ್ಯದ ಆರೋಪ
ಹಾಸನ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ ಬಳಿಕ ಎಚ್ಡಿ ರೇವಣ್ಣ ಕುಟುಂಬಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಎಚ್ಡಿ ರೇವಣ್ಣ ಅವರ ಪುತ್ರ ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರ ವಿರುದ್ಧ ಸಲಿಂಗಕಾಮ, ಅಸಹಜ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ.
ಸೂರಜ್ ರೇವಣ್ಣ ಅವರು ತನ್ನನ್ನು ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ, ದೌರ್ಜನ್ಯ ಎಸಗಿದ್ದಾರೆ. ಈಗ ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ” ಎಂದು ಅರಕಲಗೂಡಿನ ಜೆಡಿಎಸ್ ಕಾರ್ಯಕರ್ತನೋರ್ವ ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ದೂರು ಸಲ್ಲಿಸಿರುವುದಾಗಿ ವರದಿಯಾಗಿದೆ.
ಕಳೆದ ಜೂನ್ 16ರ ಭಾನುವಾರದಂದು ತನಗೆ ವಾಟ್ಸಪ್ ಮೂಲಕ ತನಗೆ ಉದ್ಯೋಗದ ನೆರವು ನೀಡುವುದಾಗಿ ಭರವಸೆಯ ಸಂದೇಶ ಕಳಿಸಿ ಗನ್ನಿಕಡದ ತೋಟದ ಮನೆಗೆ ಕರೆಸಿಕೊಂಡಿದ್ದರು. ಅವರ ಸಂದೇಶ ನಂಬಿಕೊಂಡು ಅಲ್ಲಿಗೆ ಹೋಗಿದ್ದೆ. ಅಲ್ಲಿನ ಕೊಠಡಿಯೊಂದಕ್ಕೆ ಕರೆದುಕೊಂಡು,ಸಲಿಂಗಕಾಮಕ್ಕೆ ಒತ್ತಾಯಿಸಿ, ಅವರು ತನ್ನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೇ, ನನ್ನ ದೇಹದ ಮೇಲೆಲ್ಲ ಗಾಯ ಮಾಡಿದ್ದಾರೆ. ಇದನ್ನು ಎಲ್ಲಾದರೂ ಬಾಯಿಬಿಟ್ಟರೆ ಕೊಲ್ಲುವ ಬೆದರಿಕೆ ಕೂಡ ಹಾಕಿದ್ದಾರೆ. ಈ ಘಟನೆಯಿಂದ ನಾನು ಮಾನಸಿಕವಾಗಿ ಕುಗ್ಗಿದ್ದೇನೆ” ಎಂದು ಸುದೀರ್ಘ ದೂರಿನಲ್ಲಿ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಜೆಡಿಎಸ್ ಕಾರ್ಯಕರ್ತ ಗಂಭೀರ ಆರೋಪ ಮಾಡಿರುವುದಾಗಿ ವರದಿಯಾಗಿದೆ.
ದೌರ್ಜನ್ಯಕ್ಕೆ ಒಳಗಾದ ಯುವಕನೊಬ್ಬ ಪೊಲೀಸರ ಬಳಿ ನೀಡಿರುವ ದೂರಿನಲ್ಲಿ ಎಲ್ಲವನ್ನೂ ವಿವರಿಸಿದ್ದಾನೆ. ದೌರ್ಜನ್ಯಕ್ಕೆ ಒಳಗಾದ ಯುವಕನ ದೇಹದ ಹಲವು ಭಾಗಗಳಲ್ಲಿ ಕಚ್ಚಿದ ಗುರುತುಗಳಿವೆ, ಮರ್ಮಾಂಗದಲ್ಲೂ ಗಾಯವಾಗಿದೆ ಎಂದು ವರದಿಯಾಗಿದೆ. ಪೊಲೀಸರು ಹುಡುಗನಿಂದ ದೂರು ದಾಖಲಿಸಿಕೊಂಡಿರುವದಾಗಿ ತಿಳಿದುಬಂದಿದೆ.
ಪ್ರಜ್ವಲ್ ರೇವಣ್ಣ ಪ್ರಕರಣ ಇನ್ನೂ ಸುದ್ದಿಯಲ್ಲಿರುವಾಗಲೇ, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರ ಪ್ರಕರಣ ಬೆಳಕಿಗೆ ಬಂದಿದ್ದು, ಮುಂದೆ ಯಾವ ಹಂತಕ್ಕೆ ಹೋಗಲಿದೆ ಎಂದು ಕಾದು ನೋಡಬೇಕಿದೆ.