ಡೈಲಿ ವಾರ್ತೆ: 24/ಜೂ./2024
ರಷ್ಯಾದಲ್ಲಿ ಬಂದೂಕುಧಾರಿಗಳಿಂದ ಚರ್ಚ್‌ಮೇಲೆ ದಾಳಿ: ಪಾದ್ರಿ, ನಾಗರಿಕರು ಹಾಗೂ ಪೊಲೀಸ್ ಅಧಿಕಾರಿಗಳ ಹತ್ಯೆ!
ಮಾಸ್ಕೋ: ರಷ್ಯಾದ ಡಾಗೆಸ್ತಾನ್‌ನಲ್ಲಿ ಅಪರಿಚಿತ ಬಂಧೂಕುದಾರಿಗಳು ಸಿನಗಾಗ್, ಆರ್ಥೊಡಾಕ್ಸ್ ಚರ್ಚ್‌ಗಳು ಹಾಗೂ ಪೊಲೀಸ್ ಪೋಸ್ಟ್‌ನಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಆರ್ಥೊಡಾಕ್ಸ್ ಚರ್ಚ್‌ನ ಪಾದ್ರಿ, ನಾಗರಿಕರು ಹಾಗೂ ಕನಿಷ್ಠ 15 ಮಂದಿ ಪೊಲೀಸ್ ಅಧಿಕಾರಿಗಳನ್ನು ಹತ್ಯೆಗೈದಿರುವ ಘಟನೆ ನಡೆದಿದೆ.
ಕಳೆದ ಮೂರ‍್ನಾಲ್ಕು ತಿಂಗಳ ಹಿಂದೆಯಷ್ಟೇ ಮಾಸ್ಕೋ ಬಳಿಯ ಸಂಗೀತ ಕಛೇರಿ ಹಾಲ್ ಮೇಲೆ ಇಸ್ಲಾಮಿಕ್ ಸ್ಟೇಟ್ ನಡೆಸಿದ ದಾಳಿಯಲ್ಲಿ 145 ಜನ ಸಾವನ್ನಪ್ಪಿದ್ದರು. ಇದೀಗ ಉತ್ತರ ಕಾಕಸಸ್‌ನ ಮಖಚ್ಕಲಾ ಮತ್ತು ಡರ್ಬೆಂಟ್ ನಗರಗಳಾದ್ಯಂತ ಅಂತಹದ್ದೇ ದಾಳಿಗಳು ಸಂಭವಿಸಿದೆ. ದಾಳಿಯ ಕೆಲವೇ ಸಮಯದಲ್ಲಿ ಮಖಚ್ಕಲಾದಲ್ಲಿ ನಾಲ್ವರು ಮತ್ತು ಡರ್ಬೆಂಟ್‌ನಲ್ಲಿ ಇಬ್ಬರು ಬಂದೂಕುಧಾರಿಗಳನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.
ಡಾಗೆಸ್ತಾನ್‌ನ ಅತಿದೊಡ್ಡ ನಗರ ಮಖಚ್ಕಲಾ ಮತ್ತು ಕರಾವಳಿ ನಗರ ಡರ್ಬೆಂಟ್‌ನಲ್ಲಿ ಏಕಕಾಲದಲ್ಲಿ ದಾಳಿಗಳು ನಡೆದಿದ್ದು, ಇದು ದೇಶಕ್ಕೆ ಕರಾಳ ದಿನವಾಗಿದೆ. ಅಲ್ಲದೇ ಈ ದಾಳಿಯನ್ನು ಭಯೋತ್ಪಾದಕ ದಾಳಿ ಎಂದು ಗವರ್ನರ್ ಸೆರ್ಗೆಯ್ ಮೆಲಿಕೋವ್ ತಿಳಿಸಿದ್ದಾರೆ.
ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದಾಗಿಯೂ ಸೋಮವಾರ (ಇಂದು) ವೀಡಿಯೋ ಮೂಲಕ ತಿಳಿಸಿದ್ದಾರೆ.
ಈ ಭಯೋತ್ಪಾದಕ ದಾಳಿ ಹಿಂದೆ ಯಾರಿದ್ದಾರೆ? ಅವರು ಯಾವ ಉದ್ದೇಶ ಹೊಂದಿದ್ದಾರೆ? ಅನ್ನೋದು ಸ್ಪಷ್ಟವಾಗಿದೆ ಎಂದು ಪರೋಕ್ಷವಾಗಿ ಉಕ್ರೇನ್ ವಿರುದ್ಧ ಟೀಕಿಸಿದ್ದಾರೆ. ದಾಳಿ ಹಿಂದೆ ಯಾರಿದ್ದಾರೆ ಅನ್ನೋದನ್ನ ಕಂಡುಹಿಡಿಯಲು ಅಧಿಕಾರಿಗಳು ಈಗಾಗಲೇ ತನಿಖೆ ಆರಂಭಿಸಿದ್ದಾರೆ. ಡಾಗೆಸ್ತಾನ್ ಸರ್ಕಾರ ಜೂನ್ 24ರಿಂದ 26ರ ವರೆಗೆ ಶೋಕಾಚರಣೆ ಘೋಷಿಸಿ ಆದೇಶ ಹೊರಡಿಸಿದೆ. ರಾಷ್ಟ್ರ ಧ್ವಜಗಳನ್ನು ಅರ್ಧಕ್ಕೆ ಇಳಿಸಲಾಗಿದೆ ಮತ್ತು ಎಲ್ಲ ಮನರಂಜನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಘಟನಾ ಸಂಬಂಧ ರಷ್ಯಾದ ತನಿಖಾ ಸಮಿತಿಯು ಈ ಶಂಕಿತ ಭಯೋತ್ಪಾದಕ ಕೃತ್ಯಗಳ ತನಿಖೆ ಪ್ರಾರಂಭಿಸಿದೆ. ಆದಾಗ್ಯೂ ದಾಳಿಯ ಜವಾಬ್ದಾರಿಯನ್ನು ತಕ್ಷಣಕ್ಕೆ ಯಾವ ಸಂಘಟನೆಯೂ ದಾಳಿಯ ಹೊಣೆ ವಹಿಸಿಕೊಂಡಿಲ್ಲ. ದಾಳಿಕೋರರಲ್ಲಿ ಮಧ್ಯ ಡಾಗೆಸ್ತಾನ್‌ನ ಸೆರ್ಗೋಕಲಾ ಜಿಲ್ಲೆಯ ಮುಖ್ಯಸ್ಥರ ಇಬ್ಬರು ಪುತ್ರರು ಸೇರಿದ್ದಾರೆ ಎಂದು ರಷ್ಯಾದ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.