ಡೈಲಿ ವಾರ್ತೆ: 24/ಜೂ./2024

ಮೈಮೇಲೆ ಸಗಣಿ ಬಳಿದುಕೊಂಡು ಸರ್ಕಾರದ ವಿರುದ್ಧ ರೈತರ ಆಕ್ರೋಶ, ಬೃಹತ್‌ ಪ್ರತಿಭಟನೆ

ಬೆಂಗಳೂರು: ಗುಡಿಸಲು ನಿವಾಸಿಗಳಿಗೆ ಮನೆ ಭಾಗ್ಯ ಕಲ್ಪಿಸಬೇಕು, ಹಾಲು ಉತ್ಪಾದಕ ರೈತರ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಆಗ್ರಹಿಸಿ ರೈತರಿಂದು ಬೃಹತ್‌ ಪ್ರತಿಭಟನೆ ನಡೆಸಿದರು.

ನಗರದ ಕನಕಪುರ ರಸ್ತೆಯಿಂದ ಪಾದಯಾತ್ರೆ ಆರಂಭಿಸಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ರೈತರು ಯತ್ನಿಸಿದ್ದರು. ಪಾದಯಾತ್ರೆಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಚಾಲನೆ ನೀಡಿದರು. ಕೆಲ ರೈತರು ಮೈಮೇಲೆ ಸಗಣಿ ಬಳಿದುಕೊಂಡು ಆಕ್ರೋಶ ಹೊರಹಾಕಿದರು. ಆದ್ರೆ ಮಾರ್ಗಮಧ್ಯೆ ರೈತರನ್ನು ತಡೆದ ಪೊಲೀಸರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವವರೆಗೂ ಸ್ಥಳದಲ್ಲೇ ಇರುವಂತೆ ತಡೆದರು.

ಬ್ಯಾರಿಕೇಡ್ ಹಾಕಿ ಸೋಮನಹಳ್ಳಿ ಗೇಟ್ ಬಳಿಯೇ ರೈತರನ್ನು ತಡೆದರು. ಪ್ರತಿಭಟನಾ ಮಾರ್ಗವನ್ನು ಬಂದ್‌ ಮಾಡಿದರು. ಈ ವೇಳೆ ಪೊಲೀಸರು ರೈತರ ನಡುವೆ ತಳ್ಳಾಟ, ನೂಕಾಟಗಳು ನಡೆಯಿತು. ಇದರಿಂದ ತೃಪ್ತರಾಗದ ರೈತರು ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಂದ ಸಾಧ್ಯವಿಲ್ಲ. ಕೃಷಿ ಸಚಿವರು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು.

ರೈತರ ಬೇಡಿಕೆಗಳೇನು?
1) ಬೆಂಗಳೂರು ದಕ್ಷಿಣ ತಾಲ್ಲೂಕಿನ 30 ಗ್ರಾಮಗಳಲ್ಲಿ ದಶಕಗಳಿಂದ ಉಳುಮೆ ಬಂದಿರುವ ಸಾಗುವಳಿ ಜಮೀನುಗಳನ್ನು ಪೋಡಿ, ದುರಸ್ತಿ ಮಾಡಿಕೊಟ್ಟು ರೈತರಿಗೆ ತಮ್ಮ ಜಮೀನುಗಳ ಮೇಲೆ ಸಂಪೂರ್ಣ ಹಕ್ಕನ್ನು ಕೊಡಬೇಕು.

2) ಸೋಮನಹಳ್ಳಿ ಬಳಿ ನಿರ್ಮಿಸುತ್ತಿರುವ ಟೋಲ್‌ನಲ್ಲಿ ಸ್ಥಳೀಯ ವಾಹನ ಸವಾರರಿಗೆ ಸರ್ವಿಸ್ ರಸ್ತೆ ನೀಡಬೇಕು ಅಥವಾ ಟೋಲನ್ನು ಕಗ್ಗಲೀಪುರ ಬೈಪಾಸ್ ಗೆ ಸ್ಥಳಾಂತರಿಸಬೇಕು

3) ಕಗ್ಗಲಿಪುರ, ಸಾಲುಹುಣಸೆ ಉದಿಪಾಳ್ಯ ಬೈಪಾಸ್ ರಸ್ತೆ ನಿರ್ಮಿಸಿ ಸ್ಥಳೀಯರಿಗೆ ಉಂಟಾಗುತ್ತಿರುವ ವಾಹನ ದಟ್ಟಣೆ ಸಮಸ್ಯೆಯನ್ನು ತಪ್ಪಿಸುವುದು

4) ಅರಣ್ಯ ಇಲಾಖೆ ರೈತರನ್ನು ಒಕ್ಕಲೆಸಬೇಕೆಂದು ನೀಡುತ್ತಿರುವ ಕಿರುಕುಳದಿಂದ ಮುಕ್ತಿ ಕೂಡಿಸಬೇಕು

5) 45 ವರ್ಷಗಳಿಂದ ಸಾಕಮ್ಮ ಬಡಾವಣೆಯಲ್ಲಿ ವಾಸಿಸುತ್ತಿರುವ ಗುಡಿಸಲು ನಿವಾಸಿಗಳಿಗೆ ಮನೆ ಭಾಗ್ಯ ಕಲ್ಪಿಸಬೇಕು.

6) ಪಟ್ಟರೆಡ್ಡಿ ಪಾಳ್ಯ ಗ್ರಾಮಕ್ಕೆ ಪರ್ಯಾಯ ರಸ್ತೆ ನಿರ್ಮಿಸಬೇಕು.

7) 7 ತಿಂಗಳಿನಿಂದ ತಡೆ ಹಿಡಿದಿರುವ ಹಾಲು ಉತ್ಪಾದಕ ರೈತರ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು.

8) ಅಗತ್ಯವಿರುವ ಕಡೆಗಳಲ್ಲಿ ಸೇತುವೆ ರಸ್ತೆಗಳನ್ನು ನಿರ್ಮಿಸಿ ಕೊಡಬೇಕು.

9) ಹೆಚ್ಚಿನ ಮಳೆಯಾದಾಗ ನದಿಗಳಿಗೆ ಹರಿದು ಹೋಗುತ್ತಿರುವ ಅಪಾರ ಪ್ರಮಾಣದ ನೀರನ್ನು ಕೆರೆಗಳಿಗೆ ತುಂಬಿಸಿ ಅಂತರ್ಜಲ ಹೆಚ್ಚಿಸಬೇಕು.