ಡೈಲಿ ವಾರ್ತೆ: 26/ಜೂ./2024

18ನೇ ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ: ಧ್ವನಿಮತ ಮೂಲಕ ಅಂಗೀಕಾರ

ನವದೆಹಲಿ: ಮೂರು ಬಾರಿ ಸಂಸದರಾಗಿದ್ದ ಬಿಜೆಪಿಯ ಓಂ ಬಿರ್ಲಾ ಅವರು 18ನೇ ಲೋಕಸಭೆಯ ಸ್ಪೀಕರ್ ಆಗಿ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂಟು ಬಾರಿ ಕೇರಳದ ಮಾವೇಲಿಕರ ಕೋಡಿಕುನ್ನಿಲ್ ಸುರೇಶ್ ಅವರನ್ನು ಸೋಲಿಸಿ ಸ್ಪೀಕರ್ ಆಗಿ ಮರು ಆಯ್ಕೆಗೊಂಡಿದ್ದಾರೆ.

ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಉಪಸಭಾಪತಿ ಸ್ಥಾನವನ್ನು ನೀಡಲು ನಿರಾಕರಿಸುವ ಮೂಲಕ ವಿರೋಧ ಪಕ್ಷಗಳ ಹಕ್ಕನ್ನು ಕಸಿದುಕೊಂಡಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ 48 ವರ್ಷಗಳ ನಂತರ ಲೋಕಸಭಾಧ್ಯಕ್ಷ ಸ್ಥಾನಕ್ಕೆ ಇಂದು ಸ್ಪರ್ಧೆ ನಡೆಯಿತು.

ಓಂ ಬಿರ್ಲಾ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಪ್ರಸ್ತಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಡಿಸಿದರು. ಹಂಗಾಮಿ ಸ್ಪೀಕರ್ ಅವರು ಧ್ವನಿ ಮತದ ಮೂಲಕ ಸಂಸದರ ಮತಗಳನ್ನು ಅಂಗೀಕರಿಸಿದರು.
ಓಂ ಬಿರ್ಲಾ ಅವರು ಎನ್ ಡಿಎ ಮೈತ್ರಿ ಸರ್ಕಾರದಲ್ಲಿ ಎರಡನೇ ಬಾರಿಗೆ ಲೋಕಸಭಾಧ್ಯಕ್ಷರಾಗುತ್ತಿದ್ದು, ಅವರನ್ನು ಸ್ಪೀಕರ್ ಕುರ್ಚಿ ಬಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕರೆದುಕೊಂಡು ಬಂದು ಗೌರವಿಸಿದರು. ಎರಡನೇ ಅವಧಿಗೆ ನೀವು ಲೋಕಸಭಾಧ್ಯಕ್ಷರಾಗಿ ಆಯ್ಕೆಯಾಗುತ್ತಿರುವುದು ಸದನಕ್ಕೆ ಗೌರವವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

17ನೇ ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ ಅವರ ಐದು ವರ್ಷಗಳ ಅನುಭವವು ಸದನವನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಮತ್ತು ಅದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ ಎಂಬ ಭರವಸೆಯನ್ನು ಪ್ರಧಾನಿ ವ್ಯಕ್ತಪಡಿಸಿದರು.