ಡೈಲಿ ವಾರ್ತೆ: 26/ಜೂ./2024
ಸಸಿನೆಡುವ ಮೂಲಕ ತಮ್ಮ ಜನ್ಮದಿನಾಚರಣೆ ಆಚರಿಸಿಕೊಂಡ ಹೆಚ್.ಪಿ.ಎಸ್ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ.ಮುತ್ತೇಶ್ : ಪ್ರಕೃತಿ ಆರಾಧನೆ ಮೂಲಕ ಉತ್ತಮ ಸಂದೇಶ ಸಾರಿದ ಡಾ.ಮುತ್ತೇಶ್ ಸಂಗೀತ ದಂಪತಿ
ಹರಪನಹಳ್ಳಿ : ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿ, ಸಂಭ್ರಮಿಸುವುದು ವಾಡಿಕೆ. ಹಲವಾರು ಜನ ಅಕ್ಕಪಕ್ಕದ ಹೋಟೆಲಿಗೆ ಹೋಗಿ ಜನ್ಮದಿನಾಚರಣೆಯನ್ನು ಆಚರಿಸಿಕೊಂಡರೇ, ಇನ್ನೂ ಬಹುತೇಕರು ಅಕ್ಕಪಕ್ಕದವರನ್ನು ಕರೆಸಿ ಇಪ್ಪತ್ತು – ಮೂವತ್ತು ಸಾವಿರ ರೂಪಾಯಿ ವ್ಯಯಿಸಿ ಜನ್ಮದಿನಾಚರಣೆಯನ್ನು ಮನೆಯಂಗಳದಲ್ಲಿ ವೈಭವದಿಂದ ಆಚರಿಸುತ್ತಾರೆ. ಅದು ತಪ್ಪೆನ್ನುವ ವಾದವಲ್ಲ. ಅಂತಹದರಲ್ಲಿ ಅಪರೂಪದಲ್ಲಿ ಅಪರೂಪ ಎಂಬಂತೆ ಇಲ್ಲೊಬ್ಬರು ಪರಿಸರವನ್ನು ಆರಾಧಿಸಿ, ವನದೇವತೆಯನ್ನು ಪೂಜಿಸಿ ಗಿಡಗಳನ್ನು ನೆಡುವ ಮೂಲಕ ಜನ್ಮ ದಿನಾಚರಣೆಯನ್ನು ಆಚರಿಸಿ ನಿಜವಾದ ಪರಿಸರದ ಕಾಳಜಿ ಮತ್ತು ಬದ್ಧತೆಯನ್ನು ಸಾದರಪಡಿಸಿದ್ದಾರೆ.
ಪಟ್ಟಣದ ಹೆಚ್.ಪಿ.ಎಸ್ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಮುತ್ತೇಶ್ ರವರ ಜನ್ಮದಿನಾಚರಣೆಯನ್ನು ಪ್ರಕೃತಿಯ ಮಡಿಲಲ್ಲಿ ಅಂದರೆ ಹೆಚ್.ಪಿ.ಎಸ್ ಪಿಯು ಕಾಲೇಜಿನ ಆವರಣದಲ್ಲಿ ಪ್ರಕೃತಿಯನ್ನು ಆರಾಧಿಸಿ, ಗಿಡಗಳನ್ನು ನೆಡುವ ಮೂಲಕ ವನದೇವತೆಯ ಅನುಗ್ರಹಕ್ಕೆ ಪಾತ್ರರಾಗಿ ಗಮನ ಸೆಳೆದಿದ್ದಾರೆ.
ಹೆಚ್.ಪಿ.ಎಸ್ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ.ಮುತ್ತೇಶ್ ಹಾಗೂ ಸಂಗೀತ ದಂಪತಿ ತಮ್ಮ ಜನ್ಮ ದಿನಾಚರಣೆಯನ್ನು ಹರಪನಹಳ್ಳಿ ಪಟ್ಟಣದ ಹೆಚ್.ಪಿ.ಎಸ್ ಪಿಯು ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳ ಹಾಗೂ ಸನ್ಮಿತ್ರರರೊಂದಿಗೆ ವಿವಿಧ ಜಾತಿಯ ಸಸಿಗಳನ್ನು ನೆಡುವ ಮೂಲಕ ಅರ್ಥಪೂರ್ಣವನ್ನಾಗಿಸಿದ್ದಾರೆ.
ಈ ವೇಳೆ ಡಾ.ಮುತ್ತೇಶ್ ಮಾತನಾಡಿ ನನ್ನ ಜನ್ಮದಿನಾಚರಣೆಯನ್ನು ವನಮಹೋತ್ಸವದ ಮೂಲಕ ಆಚರಿಸುತ್ತಿರುವುದು ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಸಮಾಜಕ್ಕೆ ಪಸರಿಸಿದಂತಾಗಿದೆ. ಈ ವರ್ಷದ ಜನ್ಮ ದಿನಾಚರಣೆಯನ್ನು ನನ್ನ ನೆಚ್ಚಿನ ವಿದ್ಯಾರ್ಥಿಗಳು, ಹಾಗೂ ಪದವಿ ಮತ್ತು ಪಿಯು ಕಾಲೇಜಿನ ಉಪನ್ಯಾಸಕರುಗಳು ಸ್ಮರಣೀಯವನ್ನಾಗಿಸಿದ್ದಾರೆ ಎಂದರು.
ನಾನು ಪರಿಸರದ ಬಗ್ಗೆ ಅತಿಯಾದ ಗೌರವವನ್ನು ಇಟ್ಟುಕೊಂಡು ಬಂದವನು. ಪ್ರತಿವರ್ಷವೂ ನನಗೆ ಸಾಧ್ಯವಾದಷ್ಟು ಮಟ್ಟಿಗೆ ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡುವ ಕಾರ್ಯವನ್ನು ಮಾಡುತ್ತಾ ಬಂದಿದ್ದೇನೆ. ಪರಿಸರ ಇದ್ದರೆ ನಾವು, ಪರಿಸರದಿಂದಾಗಿ ನಾವು. ಇದನ್ನು ಅರಿತು ಪರಿಸರ ಸಂರಕ್ಷಣೆಯಲ್ಲಿ ನಮ್ಮನ್ನು ನಾವು ಪರಿಪೂರ್ಣತೆಯಿಂದ ತೊಡಗಿಸಿಕೊಳ್ಳಬೇಕು. ಎಲ್ಲರಲ್ಲಿಯೂ ಪರಿಸರದ ಕಾಳಜಿ ಬರಬೇಕೆಂಬ ಧ್ಯೇಯದಡಿ ಈ ರೀತಿ ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದೇವೆ ಎಂದು ಹೇಳಿ ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಹೆಚ್.ಪಿ.ಎಸ್ ಪಿಯು ಕಾಲೇಜಿನ ಪ್ರಾಚಾರ್ಯರಾದ ಡಾ.ಮಂಜುನಾಥ ಬೆನಕನಕೊಂಡ ಅವರು ಮಾತನಾಡಿ ಡಾ.ಮುತ್ತೇಶ್ ರವರಿಗೆ ಇರುವಂತಹ ಪರಿಸರದ ಕಾಳಜಿ, ಪರಿಸರದ ಬಗ್ಗೆ ಇರುವ ಬದ್ಧತೆ ಎಲ್ಲರಿಗೂ ಬರಬೇಕು. ಈ ನಿಟ್ಟಿನಲ್ಲಿ ಡಾ.ಮುತ್ತೇಶ್ ಮತ್ತು ಸಂಗೀತ ದಂಪತಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿ ಜನ್ಮ ದಿನಾಚರಣೆಯ ವೇಳೆ ಶುಭವನ್ನು ಹಾರೈಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕಿಯಾದ ಸಂಗೀತ ಡಾ.ಮುತ್ತೇಶ್, ಹೆಚ್.ಪಿ.ಎಸ್ ಪಿಯು ಕಾಲೇಜಿನ ಪ್ರಾಚಾರ್ಯರಾದ ಡಾ.ಮಂಜುನಾಥ್ ಬೆನಕನಕೊಂಡ, ಉಪನ್ಯಾಸಕರಾದ ಡಿ.ಸಿ ಪ್ರದೀಪ್, ಮಂಜುನಾಥ ಮಾಳ್ಗಿ, ವೀರಣ್ಣ, ಗುರುಬಸವರಾಜ್, ಪದವಿ ಕಾಲೇಜಿನ ಪ್ರಥಮ ದರ್ಜೆ ಸಹಾಯಕರಾದ ನವೀನ್ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.