ಡೈಲಿ ವಾರ್ತೆ: 27/ಜೂ./2024
ಕೊಡಗಿನಲ್ಲಿ ಮಳೆಯಾರ್ಭಟ: ತ್ರಿವೇಣಿ ಸಂಗಮದ ಸ್ನಾನಘಟ್ಟ ಮುಳುಗಡೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿದ್ದು, ತೀವ್ರ ಮಳೆಗೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸ್ನಾನಘಟ್ಟ ಮುಳುಗಡೆಯಾಗಿದೆ.
ಬ್ರಹ್ಮಗಿರಿ ತಪ್ಪಲಿನಲ್ಲಿ ನಿರಂತರ ಮಳೆಯಿಂದಾಗಿ ತ್ರಿವೇಣಿ ಸಂಗಮ ಮುಳುಗಡೆಯಾಗಿದೆ. ಹೀಗಾಗಿ ಹೊಸದಾಗಿ ನಿರ್ಮಿಸಿದ್ದ ಉದ್ಯಾನವನ ಸಂಪೂರ್ಣವಾಗಿ ಮುಳುಗಿದೆ. ಹೀಗೆ ಮಳೆ ಮುಂದುವರಿದರೆ ಭಗಂಡೇಶ್ವರ ದೇವಾಲಯದ ಮುಂಭಾಗದ ಆವರಣಕ್ಕೂ ನೀರು ನುಗ್ಗುವ ಸಾಧ್ಯತೆಗಳಿವೆ. ಅಲ್ಲದೇ ನಾಪೋಕ್ಲು- ಭಾಗಮಂಡಲ ರಸ್ತೆ ಜಲಾವೃತವಾಗುವ ಸಾಧ್ಯತೆ ಇದೆ.
ಬ್ರಹ್ಮಗಿರಿ ಬೆಟ್ಟ ತಲಕಾವೇರಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ, ಕನ್ನಿಕೆ ಸುಜ್ಯೋತಿ ನದಿಗಳು ತುಂಬಿ ಹರಿಯುತ್ತಿದ್ದು, ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ.