ಡೈಲಿ ವಾರ್ತೆ: 28/ಜೂ./2024
ಮಾಣಿ : ಚತುಷ್ಪಥ ಕಾಮಗಾರಿ ಹಿನ್ನೆಲೆ, ಅಪಾಯದಲ್ಲಿ ಮನೆಗಳು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ
ಬಂಟ್ವಾಳ : ಮಾಣಿ ಸಮೀಪದ ಹಳೀರ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಅವೈಜ್ಞಾನಿಕ ರೀತಿಯಲ್ಲಿ ಮಣ್ಣು ತೆಗೆದು ತಡೆಗೋಡೆ ನಿರ್ಮಿಸದೆ ಇರವ ಕಾರಣ ಹೆದ್ದಾರಿ ಬದಿ ಎತ್ತರದಲ್ಲಿದ್ದ ಮನೆಗಳು ಅಪಾಯದಲ್ಲಿದ್ದ ಹಿನ್ನೆಲೆಯಲ್ಲಿ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಹಳೀರ ಎಂಬಲ್ಲಿ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗಿ ಖತೀಜಮ್ಮ, ಆಯಿಷಾ ಅವರ ಮನೆ ಅಪಾಯದಲ್ಲಿದ್ದು, ಪಳಿಕೆ ಹಮೀದ್ ಅವರ ಮನೆಗೆ ಕಾಮಗಾರಿಯ ವೇಳೆ ಚರಂಡಿ ನಿರ್ಮಾಣ ಮಾಡದ ಪರಿಣಾಮ ನೀರು ಮನೆಯೊಳಗಡೆ ಹರಿದು ತೊಂದರೆಯಾಗಿತ್ತು. ಖತೀಜಮ್ಮ ಅವರ ಕುಟುಂಬವು ಸುಮಾರು ನಲ್ವತ್ತು ವರ್ಷಗಳಿಂದ ವಾಸವಿದ್ದು ಎಂಟು ವರ್ಷಗಳ ಹಿಂದೆ ಹಳೆ ಮನೆ ರಿಪೇರಿ ಮಾಡಿಸಿ ಕಾಂಕ್ರೀಟ್ ಟೆರೇಸ್ ಮಾಡಿದ್ದರು. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಿರ್ಮಾಣಕ್ಕೆ ಗುತ್ತಿಗೆದಾರರು ಸ್ವಾಧೀನ ಪಡಿಸಿಕೊಂಡ ಜಾಗಕ್ಕಿಂತ ಹೆಚ್ಚು ಜಾಗದಿಂದ ಮಣ್ಣು ತೆಗೆದು ಮನೆ ಬೀಳುವಂತೆ ಮಾಡಿದ್ದು ತಡೆಗೋಡೆ ಕೂಡಾ ನಿರ್ಮಿಸದೆ ಸತಾಯಿಸುತ್ತಿರುವ ಬಗ್ಗೆ ಮನೆಯವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.
ಅದರಂತೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮಾಣಿ ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಆಳ್ವ, ಮೆಲ್ವಿನ್ ಕಿಶೋರ್ ಮಾರ್ಟಿಸ್, ಪಂಚಾಯತ್ ಅಧಿಕಾರಿಗಳು, ಸ್ಥಳೀಯರಾದ ಗಣೇಶ್ ರೈ ಮಾಣಿ, ಉಮೇಶ್ ಶೆಟ್ಟಿ ಮಾಣಿ, ಅಝೀಝ್ ಮಾಣಿ, ಸಲೀಂ ಮಾಣಿ, ಬಶೀರ್ ಮಾಣಿ, ಅಶ್ರಫ್, ಮಜೀದ್, ಕರೀಂ, ಅಮೀರ್, ಇಬ್ರಾಹಿಂ, ಸಿದ್ದೀಕ್ ಹಳೀರ, ಮುಹಮ್ಮದ್ ಹನೀಫ್ ಪಂತಡ್ಕ, ಮೊದಲಾದವರು ಉಪಸ್ಥಿತರಿದ್ದರು.