ಡೈಲಿ ವಾರ್ತೆ: 30/ಜೂ./2024

ಹೂವಿನಕೆರೆ ಶ್ರೀ ವಾದಿರಾಜ ಮಠ – ಉಚಿತ ಗಿಡ ವಿತರಣೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ – ಸೋದೆ ಶ್ರೀ

ಕುಂದಾಪುರ : ಎಲ್ಲ ಜೀವಿಗಳ ಅತಿ ಮೂಲಭೂತ ಅವಶ್ಯಕತೆಗಳಲ್ಲಿ ಅನ್ನ, ನೀರು, ಗಾಳಿ ಸೇರಿದೆ. ಆದರೆ, ಇಂದು ಪರಿಸರ ಮಾಲಿನ್ಯದಿಂದಾಗಿ ಇವೆಲ್ಲವೂ ಕಲುಷಿತಗೊಂಡಿವೆ. ಗಿಡ – ಮರ ಬೆಳೆಸುವುದರ ಮೂಲಕ ಪರಿಸರವನ್ನು ಸಂರಕ್ಷಿಸಿ, ಎಲ್ಲ ಜೀವಿಗಳಿಗೂ ಬದುಕಲು ಅನುವು ಮಾಡಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮಿಯವರು ಹೇಳಿದರು.

ಕೋಟೇಶ್ವರ ಸಮೀಪದ, ಶ್ರೀ ವಾದಿರಾಜ ಗುರುಗಳ ಜನ್ಮಕ್ಷೇತ್ರ ಹೂವಿನಕೆರೆಯಲ್ಲಿ ಶನಿವಾರ, ದಾನಿಗಳ ಪ್ರಾಯೋಜಕತ್ವದಲ್ಲಿ ನಡೆದ ಗಿಡ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

ನಮ್ಮ ಹಿರಿಯರು ಮನೆ ಪರಿಸರದಲ್ಲಿ ತೆಂಗು, ಮಾವು, ಹಲಸು ಇತ್ಯಾದಿ ಫಲವೃಕ್ಷಗಳನ್ನು ನೆಟ್ಟು ಪೋಷಿಸುತ್ತಿದ್ದರು. ಮನೆಯಲ್ಲಾಗುವ ಶುಭಕಾರ್ಯಗಳಿಗೆ ಅವಶ್ಯವಿರುವ ಫಲ, ಪುಷ್ಪ, ಸಮಿತ್ತುಗಳು ಅವುಗಳಿಂದಲೇ ಸಿಗುತ್ತಿತ್ತು. ಆದರೆ, ಇಂದು ಇವುಗಳನ್ನೆಲ್ಲ ಅಂಗಡಿಗಳಿಂದಲೇ ತರುವ ಪರಿಸ್ಥಿತಿ ಇದೆ. ಮನೆಯ ಪರಿಸರವನ್ನು ಇಂಟರ್ ಲಾಕ್, ಸಿಮೆಂಟ್ ನಿಂದ ಮುಚ್ಚಿ, ಗಿಡ – ಮರ ಬೆಳೆಯದಿರುವುದೇ ಈ ಪರಿಸ್ಥಿಗೆ ಕಾರಣ. ಮನೆ ವಠಾರದಲ್ಲಿ ಗಿಡಮರಗಳಿದ್ದರೆ, ಹಣ್ಣು ಹೂವುಗಳು ಮನೆಯವರಿಗೆ ಮಾತ್ರವಲ್ಲದೆ, ಪರಿಸರದ ಪ್ರಾಣಿ ಪಕ್ಷಿಗಳಿಗೂ ಆಹಾರ, ಶುದ್ಧ ಹವೆ ಸಿಗುತ್ತದೆ ಎಂದು ಅವರು ಹೇಳಿದರು.

ವೃಕ್ಷದಾನದ ಬಗ್ಗೆ ತಿಳಿಸಿದ ಸ್ವಾಮೀಜಿಯವರು, ವೃಕ್ಷದಾನದಿಂದ, ಅದನ್ನು ಪಡೆದವರು ಮಾತ್ರವಲ್ಲದೆ, ಇಡೀ ಪರಿಸರಕ್ಕೇ ಪ್ರಯೋಜನವಾಗುತ್ತದೆ. ಇಂದು ಗಿಡಗಳನ್ನು ಪಡೆದವರು ಜತನದಿಂದ ಅವನ್ನು ಬೆಳೆಸಿ, ಮುಂದೆ ಇತರರಿಗೂ ಗಿಡಗಳ ದಾನವನ್ನು ನೀಡಬೇಕು. ಆ ಮೂಲಕ ಪರಿಸರ ರಕ್ಷಣೆಗೆ ತಮ್ಮ ಕೊಡುಗೆಯನ್ನು ನೀಡಬೇಕು. ಹೀಗಾದರೆ, ಹವಾಮಾನ ವೈಪರೀತ್ಯದ ಬೇಗೆಯನ್ನು ತಡೆದು, ಏ ಸಿ, ಫ್ಯಾನ್ ಗಳ ಅವಲಂಬನೆ ತಪ್ಪುತ್ತದೆ ಎಂದು ತಿಳಿಸಿದರು. ನೆರೆದ ಭಕ್ತ ಜನರಿಗೆ ಅವರು ವಿವಿಧ ಗಿಡಗಳನ್ನು ವಿತರಿಸಿ ಆಶೀರ್ವದಿಸಿದರು.

ವೃಕ್ಷ ದಾನದ ಪ್ರಾಯೋಜಕತ್ವವನ್ನು ವಹಿಸಿದ್ದ ಉದ್ಯಮಿ ವಾಸುದೇವ ಕಾಮತ್ – ಶಿಲ್ಪಾ ದಂಪತಿಯನ್ನು ಸ್ವಾಮಿಗಳು ಸನ್ಮಾನಿಸಿದರು. ರಕ್ತದಾನದ ಮೂಲಕ ಹಲವು ಜೀವಗಳನ್ನು ಉಳಿಸಿದ ಪ್ರಶಾಂತ್ ಪೂಜಾರಿ, ಗೋಪಾಡಿ ಶ್ರೀನಿವಾಸ ಹತ್ವಾರ್, ಭಜನಾ ಸೇವೆ ಸಲ್ಲಿಸಿದ ಕೊರವಡಿ ಶ್ರೀ ರಾಮ ಭಜನಾ ಮಂಡಳಿಯ ಮಹಿಳೆಯರು, ಸಮಾಜ ಸೇವಕ ಸಾಯಿನಾಥ ಶೇಟ್, ವಿವಿಧ ಸೇವಾಕರ್ತರು, ದಾನಿಗಳು ಕುಶಲಕರ್ಮಿಗಳನ್ನು ಗೌರವಿಸಲಾಯಿತು.

ಕೆ ಜಿ ವೈದ್ಯ ಸ್ವಾಗತಿಸಿದರು. ಉಸ್ತುವಾರಿ ರಾಮಚಂದ್ರ ವರ್ಣ ಪ್ರಾಸ್ತಾವಿಕ ಮಾತುಗಳನ್ನಾಡಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ವಿವರ ನೀಡಿದರು. ಸೀತಾರಾಮ ಧನ್ಯ ವಂದಿಸಿದರು.